ADVERTISEMENT

ಬಿಜೆಪಿ ಎಂದರೆ ಬರೀ ಬೂಟಾಟಿಕೆ ಪಾರ್ಟಿ, ಸುಳ್ಳುಕೋರರ ಸಂತೆ: ಕುಮಾರಸ್ವಾಮಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2022, 10:44 IST
Last Updated 31 ಡಿಸೆಂಬರ್ 2022, 10:44 IST
ಎಚ್‌.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ
ಎಚ್‌.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಶಾ   

ಬೆಂಗಳೂರು: ಬಿಜೆಪಿ ಎಂದರೆ ಬರೀ ಬೂಟಾಟಿಕೆ ಪಾರ್ಟಿ, ಸುಳ್ಳುಕೋರರ ಸಂತೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಂಡ್ಯದಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಅಮಿತ್‌ ಶಾ ಅವರು, ‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ದೆಹಲಿಯ ಎಟಿಎಂ ಆಗಲಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಎಟಿಎಂ ಆಗಲಿದೆ. ಪದೇ ಪದೇ ಈ ಪಕ್ಷಗಳು ಭ್ರಷ್ಟಾಚಾರದಿಂದ ರಾಜ್ಯವನ್ನು ಹೊಲಸೆಬ್ಬಿಸಿವೆ. ರಾಜ್ಯವನ್ನು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು, ಮಂಡ್ಯದಿಂದಲೇ ಬಿಜೆಪಿ ವಿಜಯಯಾತ್ರೆ ಆರಂಭವಾಗಲು‌, ಪ್ರಧಾನಿಯವರ ಕೈಗಳನ್ನು ಬಲಪಡಿಸಿ’ ಎಂದು ಕೋರಿದ್ದರು.

ಅಮಿತ್‌ ಶಾ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ‘ಬಿಜೆಪಿ ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು; ಇದು ನಿಮ್ಮ ಪಕ್ಷದ ನಿಜ ಸ್ವರೂಪ‘ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

’ಅಮಿತ್ ಶಾ ಅವರೇ, ನೀವು ಸರ್ವಾಧಿಕಾರಿ ಹಿಟ್ಲರನ ಸಂಪುಟದ ಗೊಬೆಲ್ಲನ ಹೊಸ ಅವತಾರ! ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು? ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ವಿಕಲಚೇತನರ ಎಟಿಎಂ ಆಗುತ್ತದೆ‘ ಎಂದು ಎಚ್‌ಡಿಕೆ ಕುಟುಕಿದ್ದಾರೆ.

’ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ’ಎನಿ ಟೈಮ್ ಮನುಷ್ಯತ್ವ’ ಎಂದು. ನಿಮ್ಮ ಪಾಲಿಗೆ ಅದು 'ಎನಿ ಟೈಮ್ ಮೋಸ'. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಶಾ ಅವರೇ, ದೇಶದ ಮಾತು ಹಾಗಿರಲಿ, ಕರ್ನಾಟಕದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ‘ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಕರ್ನಾಟಕದ ಬಿಜೆಪಿ ಎಟಿಎಂಗಳು:
1.40% ಕಮೀಷನ್
2.ಪಿಎಸ್‌ಐ ಹಗರಣ
3.ಪ್ರಶ್ನೆಪತ್ರಿಕೆ ಸೋರಿಕೆ
3.ಸಹ ಪ್ರಾಧ್ಯಾಪಕರ ನೇಮಕ ಹಗರಣ
4.ವೈದ್ಯ ಪ್ರಾಧ್ಯಾಪಕರ ನೇಮಕ ಹಗರಣ
5.ಕೋವಿಡ್‌ನಲ್ಲಿ ಕೊಳ್ಳೆ
6.ಕಾಸಿಗಾಗಿ ಪೋಸ್ಟಿಂಗ್
7.ಗಂಗಾಕಲ್ಯಾಣ ಕರ್ಮಕಾಂಡ
8.ಚಿಲುಮೆ ಹಗರಣ
ಇದು ಅಪೂರ್ಣ ಪಟ್ಟಿ, ಅದು ಕೂಡ ದೊಡ್ಡದಿದೆ!! ಬೇಕಾ ಅಮಿತ್ ಶಾ ಅವರೇ? ಎಂದು ಎಚ್‌ಡಿಕೆ ಗರಂ ಆಗಿದ್ದಾರೆ.

ಕರ್ನಾಟಕದ ನಿಮ್ಮ ಬಿಜೆಪಿ ಸರ್ಕಾರ ಕೇವಲ 40 ಪರ್ಸೆಂಟ್‌ ಸರ್ಕಾರ ಅಲ್ಲವೇ ಅಲ್ಲ. ಅದು 55-60ಪರ್ಸೆಂಟ್‌ ಸರ್ಕಾರ!! ನಿಮಗೂ ಮಾಹಿತಿ ಇರುತ್ತದೆ. ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ, ಅರಿತುಕೊಳ್ಳಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.