ADVERTISEMENT

ಕೇಸರಿ ಧ್ವಜ ಹಾರಿಸುವುದಾಗಿ ಈಶ್ವರಪ್ಪ ಹೇಳಿಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 20:00 IST
Last Updated 17 ಫೆಬ್ರುವರಿ 2022, 20:00 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ನಾನೇ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಲ್ಲ. ಕಾಂಗ್ರೆಸ್‌ ತನ್ನ ಪ್ರತಿಷ್ಠೆಗಾಗಿ ಕಲಾಪ ಹಾಳು ಮಾಡುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳ ಕಾರ್ಯಸೂಚಿ. ಆ ಕಾರಣದಿಂದ ಮುಂದೊಂದು ದಿನ ಕೆಂಪುಕೋಟೆಯಲ್ಲಿ ಯಾರಾದರೂ ಕೇಸರಿ ಧ್ವಜ ಹಾರಿಸಬಹುದು ಎಂದು ಈಶ್ವರಪ್ಪ ಹೇಳಿದ್ದರು’ ಎಂದರು.

‘ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಕೇಸರಿ ಬಣ್ಣ ಹಾಗೂ ಕೇಸರಿ ವಸ್ತ್ರಕ್ಕೆ ಪೂಜ್ಯ ಸ್ಥಾನವಿದೆ. ಧಾರ್ಮಿಕ ಕ್ಷೇತ್ರದಲ್ಲಿರುವವರು ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ. ಬಿಜೆಪಿ, ಆರ್‌ಎಸ್ ಎಸ್ ಮತ್ತದರ ಸಹ ಸಂಘಟನೆಗಳು ಕೇಸರಿ ಬಾವುಟವನ್ನು ಇಟ್ಟುಕೊಂಡೇ ಹೋರಾಟ ಮಾಡುತ್ತಿವೆ. ಹಿಂದೂಗಳ ಪಾಲಿಗೆ ಕೇಸರಿ ಪವಿತ್ರ ವಸ್ತ್ರ. ಅದರ ಘನತೆಯನ್ನು ಯಾರೂ ಹಾಳು ಮಾಡಬಾರದು’ ಎಂದು ಹೇಳಿದರು.

ADVERTISEMENT

‘ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಧ್ವಜ ಸ್ತಂಭಗಳನ್ನು ನೆಡುವ, ಅವುಗಳಲ್ಲಿ ತಮ್ಮ ಸಂಘಟನೆಗಳ ಬಾವುಟ ಹಾರಿಸುವ ಪದ್ಧತಿ ಇದೆ. ಖಾಲಿ ಇರುವ ಧ್ವಜ ಸ್ತಂಭಗಳಲ್ಲಿ ಕೇಸರಿ ಬಾವುಟ ಹಾರಿಸುವುದನ್ನು ನೋಡಿದ್ದೇವೆ. ಈ ವಿಷಯವನ್ನು ದೊಡ್ಡದು ಮಾಡಿ ಸದನದ ಕಲಾಪವನ್ನು ಹಾಳು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಯಬೇಕಿತ್ತು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಕಡೆಗಣಿಸಲಾಗುತ್ತಿದೆ. ಹತ್ತು ನಿಮಿಷ ಕಲಾಪ ನಡೆಸಿ, ಮುಂದೂಡುವುದು ಸರಿಯಲ್ಲ. ಅಧಿವೇಶನಕ್ಕೆ ಪ್ರತಿದಿನ ₹ 1.5ರಿಂದ ₹ 2 ಕೋಟಿ ವೆಚ್ಚವಾಗುತ್ತಿದೆ. ಸರಿಯಾಗಿ ಕಲಾಪ ನಡೆಸಲಾಗದಿದ್ದರೆ ಅನಿರ್ದಿಷ್ಟಾವಧಿಗೆ ಮುಂದೂಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.