ಅಮಾನತು
ಬೆಂಗಳೂರು: ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ ಅಮಾನತುಗೊಂಡಿದ್ದ ಬಿಜೆಪಿಯ 18 ಶಾಸಕರ ಅಮಾನತು ಆದೇಶ ರದ್ದುಪಡಿಸುವ ಪ್ರಸ್ತಾವಕ್ಕೆ ಸೋಮವಾರ ವಿಧಾನಸಭೆ ಅನುಮೋದನೆ ನೀಡಿತು.
ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಪ್ರಸ್ತಾವ ಮಂಡಿಸಿದರು. ಮೇ 25 ರಂದು ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮಾನತು ಆದೇಶ ರದ್ದುಗೊಳಿಸಲು ತೀರ್ಮಾನಿಸಲಾಗಿತ್ತು. ಸೋಮವಾರ ಇದಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು.
ಬಜೆಟ್ ಅಧಿವೇಶನದ ವೇಳೆ ಸದನದಲ್ಲಿ ಗದ್ದಲ ನಡೆಸಿ, ಸಭಾಧ್ಯಕ್ಷರ ಪೀಠಕ್ಕೆ ಕಾಗದ ತೂರಿದ ಕಾರಣಕ್ಕೆ ಬಿಜೆಪಿಯ ದೊಡ್ಡನಗೌಡ ಪಾಟೀಲ (ವಿರೋಧ ಪಕ್ಷದ ಮುಖ್ಯ ಸಚೇತಕ), ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಸ್.ಎನ್. ಚನ್ನಬಸಪ್ಪ, ಉಮಾನಾಥ ಕೋಟ್ಯಾನ್, ಬಿ. ಸುರೇಶ್ ಗೌಡ, ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಸಿ.ಕೆ.ರಾಮಮೂರ್ತಿ, ಯಶ್ ಪಾಲ್ ಸುವರ್ಣ, ಹರೀಶ್ ಬಿ. ಪಿ, ಡಾ.ಭರತ್ ಶೆಟ್ಟಿ, ಬಸವರಾಜ ಮತ್ತಿಮಡು, ಧೀರಜ್ ಮುನಿರಾಜು, ಮುನಿರತ್ನ ಮತ್ತು ಡಾ.ಚಂದ್ರು ಲಮಾಣಿ ಅಮಾನತುಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.