ADVERTISEMENT

ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ: ಸಿದ್ದರಾಮಯ್ಯ

ಪ್ರಧಾನಿ ಮೋದಿ ಜನಪ್ರಿಯತೆ ಇಳಿಮುಖ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 15:50 IST
Last Updated 14 ಜುಲೈ 2023, 15:50 IST
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಪರಿಷತ್ತಿನ ಸಭಾನಾಯಕ ಎನ್.ಎಸ್.ಬೋಸರಾಜು, ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್‌ನ ಕೆ.ಗೋವಿಂದರಾಜ್, ಸಲೀಂ ಅಹ್ಮದ್, ಜಗದೀಶ ಶೆಟ್ಟರ್‌ ಇದ್ದಾರೆ
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ನಡೆದ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಪರಿಷತ್ತಿನ ಸಭಾನಾಯಕ ಎನ್.ಎಸ್.ಬೋಸರಾಜು, ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್‌ನ ಕೆ.ಗೋವಿಂದರಾಜ್, ಸಲೀಂ ಅಹ್ಮದ್, ಜಗದೀಶ ಶೆಟ್ಟರ್‌ ಇದ್ದಾರೆ    –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇಳಿಮುಖವಾಗುತ್ತಿದೆ. ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, ಮೋದಿ ಅವರಿಗೆ ಜನಪ್ರಿಯತೆ ಇದೆ ಎನ್ನುವುದಲ್ಲಿ ಯಾವುದೇ ಆಕ್ಷೇಪ ಇಲ್ಲ. ಈಗ ಅದು ಚಲಾವಣೆ ಕಳೆದುಕೊಳ್ಳುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಅವರು ಹಲವು ಬಾರಿ ಬಂದುಹೋದರೂ ಪ್ರಯೋಜವಾಗಲಿಲ್ಲ. ಅವರು ಪ್ರಚಾರ ಮಾಡಿದ ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಒಬ್ಬ ಶಾಸಕರೂ ಇಲ್ಲ. ಅವರ ಜನಪ್ರಿಯತೆ ಕುಸಿಯುತ್ತಿರುವುದಕ್ಕೆ ಇದು ಸಾಕ್ಷಿ ಎಂದರು.

ಮನುಷ್ಯರನ್ನು ವಿಂಗಡಿಸುವುದು, ಜಾತಿ, ಧರ್ಮಗಳ ಮಧ್ಯೆ ಬೆಂಕಿಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಅಮಾನವೀಯ, ಪರಂಪರೆಗೆ ವಿರುದ್ಧ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆ. ರಾಜ್ಯದ ಜನರೂ ಎಲ್ಲ ಜಾತಿ, ಧರ್ಮಗಳ ಒಳಿತನ್ನು ಬಯಸುತ್ತಾರೆ. ಹಾಗಾಗಿಯೇ, ರಾಜ್ಯದಲ್ಲಿ ಬಿಜೆಪಿ ಒಮ್ಮೆಯೂ ಸ್ಪಷ್ಟ ಬಹುಮತ ಪಡೆದಿಲ್ಲ. 2008 ಹಾಗೂ 2019ರಲ್ಲಿ ವಾಮಮಾರ್ಗದ ಮೂಲಕ ಅಧಿಕಾರ ಪಡೆದರು. ಮುಂದೆಯೂ ಅವರು ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದ್ದಾರೆ ಎಂದು ಹೇಳಿದರು. 

ADVERTISEMENT

ಸಿದ್ದರಾಮಯ್ಯ ಅವರ ಮಾತುಗಳಿಗೆ ಪ್ರತಿ ಬಾರಿಯೂ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ವೈ.ಎ.ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಎನ್‌.ರವಿಕುಮಾರ್ ಮತ್ತಿತರರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಸಚಿವರಾದ ಪ್ರಿಯಾಂಗ್ ಖರ್ಗೆ, ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್, ಪ್ರಕಾಶ್‌ ರಾಥೋಡ್‌, ಯು.ಬಿ.ವೆಂಕಟೇಶ್, ಎಸ್‌. ರವಿ ಮೊದಲಾದವರು ಮುಖ್ಯಮಂತ್ರಿ ಬೆಂಬಲಕ್ಕೆ ನಿಲ್ಲುತ್ತಿದ್ದರು. ಗದ್ದಲದ ವಾತಾವರಣ ತಣ್ಣಗಾಗಿಸಲು ಸಭಾಪತಿ ಬಸವರಾಜ ಹೊರಟ್ಟಿ ಹರಸಾಹಸಪಟ್ಟರು. 

‘ಹೀಗೆ ಪದೇಪದೇ ಅಡ್ಡಿಪಡಿಸಿ ದುರುದ್ದೇಶದಿಂದ ದಾರಿ ತಪ್ಪಿಸಬಹುದು ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಯಾರಿಗೆ ಸಿದ್ದಾಂತದ ಬಗ್ಗೆ ಸ್ಪಷ್ಟತೆ ಇರುತ್ತದೆಯೋ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಏನೇ ಪ್ರಶ್ನೆ ಕೇಳಿದರೂ ಉತ್ತರ ಕೊಡುವ ಸಾಮರ್ಥ್ಯ ಸರ್ಕಾರಕ್ಕಿದೆ. ನಿಮಗೆ ದೆಹಲಿ, ಮೋದಿ ಹೊಗಳಿಕೆ ಬಿಟ್ಟರೆ ಬೇರೆ ಏನೂ ಇಲ್ಲ. ಅದಕ್ಕೆ ನನ್ನದೇನೂ ತಕರಾರು ಇಲ್ಲ‘ ಎಂದು ಸಿದ್ದರಾಮಯ್ಯ ಮತ್ತೆ ಮಾತು ಮುಂದುವರಿಸಿದರು.

ಬಿಜೆಪಿ ಸೋಲಿನ ವಿಶ್ಲೇಷಣೆ ಮಾಡುತ್ತಿದ್ದಾಗಲೂ ಮಧ್ಯೆ ಪ್ರವೇಶಿಸಿದ ಬಿಜೆಪಿಯವರು, ಕಾಂಗ್ರೆಸ್‌ ಗ್ಯಾರಂಟಿ ನಂಬಿ ಜನರು ಮತ ಹಾಕಿದ್ದಾರೆ. ಹಾಗಾಗಿ, ಬಿಜೆಪಿಗೆ ಕಡಿಮೆ ಸ್ಥಾನ ಬಂದವು ಎಂದರು.

‘ಚುನಾವಣೆಯಲ್ಲಿ ಎಲ್ಲರೂ ಭರವಸೆ ನೀಡಿದ್ದರು. ಜೆಡಿಎಸ್‌ ಸಹ ಪಂಚರತ್ನ ಭರವಸೆ ನೀಡಿತ್ತು. ಆದರೆ, ಜನ ನಮ್ಮ ಮೇಲೆ ವಿಶ್ವಾಸವಿಟ್ಟರು. ನಾವು ಜನರ ಜೋಬಿಗೆ ದುಡ್ಡು ಹಾಕುತ್ತೇವೆ. ಅನ್ನಕ್ಕೂ ಜಿಎಸ್‌ಟಿ ಹಾಕುವ ಮೂಲಕ ಬಿಜೆಪಿ ಸರ್ಕಾರ ಜನರ ಜೋಬಿನಿಂದ ಹಣ ಕಿತ್ತುಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಅಕ್ಕಿಯನ್ನೂ ನಿಮ್ಮ ಗ್ಯಾರಂಟಿಗೆ ಸೇರಿಸಿಕೊಂಡಿದ್ದೀರಿ. ಬರಿ ಸುಳ್ಳು ಹೇಳುಹೇಳುವುದೇ ನಿಮ್ಮ ಕಾಯಕ. ಸುಳ್ಳು ಹೇಳುವ ಮುಖ್ಯಮಂತ್ರಿಗೆ ಧಿಕ್ಕಾರ. ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗುತ್ತಾ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.

‘ರಾಜ್ಯದ ಮುಖ್ಯಮಂತ್ರಿಗೆ ಕನಿಷ್ಠ ಗೌರವ ಕೊಡುವ ಸೌಜನ್ಯವಿಲ್ಲ. ಇದು ರಾಜ್ಯದ ಬಡವರಿಗೆ ಮಾಡುವ ಅಪಮಾನ. ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್‌ ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿರುವುದಕ್ಕೆ ಅವರಿಗೆ ಹೊಟ್ಟೆಉರಿ. ಜನರೇ ಬುದ್ದಿಕಲಿಸುತ್ತಾರೆ. ಶಿಸ್ತಿನ ಪಕ್ಷದಲ್ಲಿ ರಾಜಕೀಯ ದಿವಾಳಿತನ ಕಾಣುತ್ತಿದೆ’ ಎಂದು ಮುಖ್ಯಮಂತ್ರಿ ಮಾತುಮುಗಿಸಿದರು. 

ಬಿಜೆಪಿಗರ ಕೆರಳಿಸಿದ ಹಿಟ್ಲರ್‌ ಕಥೆ
‘ಹಿಟ್ಲರ್‌ ಜರ್ಮನ್ನರೇ ಶ್ರೇಷ್ಠ ಎಂದು ಸದಾ ಪ್ರತಿಪಾದಿಸುತ್ತಿದ್ದ. ಆತನ ದಿಸೆಯಿಂದಾಗಿ ಎರಡು ವಿಶ್ವ ಮಹಾಯುದ್ದಗಳೇ ನಡೆದವು. ಜನಾಂಗೀಯ ಕಾರಣಕ್ಕಾಗಿ ಯಹೂದಿಗಳನ್ನು ದ್ವೇಷಿಸುತ್ತಿದ್ದ. ಆದರೆ ಯಹೂದಿಗಳಿಗಿಂತ ಹೆಚ್ಚಾಗಿ ಜರ್ಮನ್ನರನ್ನೇ ಕೊಂದ. ಕೊನೆಗೆ ಆತ್ಮಹತ್ಯೆ ಮಾಡಿಕೊಂಡ’ ಎಂದು ಸಿದ್ದರಾಮಯ್ಯ ಹೇಳಿದರು. ಹಿಟ್ಲರ್‌ ವಿಷಯ ಪ್ರಸ್ತಾಪಿಸುತ್ತಿದಂತೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಮಾತಿಗೆ ಅಡ್ಡಿಪಡಿಸಿದರು.   ‘ಹಿಟ್ಲರ್‌ ಬಗ್ಗೆ ಮಾತನಾಡಿದರೆ ಬಿಜೆಪಿಗೇಕೆ ಕೋಪ‘ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ನೀವು ಹಿಟ್ಲರ್‌ ರೀತಿ ಮಾತನಾಡಿದರೆ ನಾವು ಹೇಗೆ ಸಹಿಸುವುದು’ ಎಂದು ಭಾರತಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ‘ಬಿಜೆಪಿಯವರು ಒಳ್ಳೆಯವರೆ. ಕೇಶವ ಕೃಪಾವನ್ನು (ಆರೆಸ್ಸೆಸ್‌ ಕೇಂದ್ರ ಸ್ಥಾನ) ನೋಡಿದಾಕ್ಷಣ ಹಾಗೆ ಮಾಡ್ತಾರೆ’ ಎಂದು ಮುಖ್ಯಮಂತ್ರಿ ಟೀಕಿಸಿದರು.
ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಚೀಟಿ: ಶೆಟ್ಟರ್‌
ವಿರೋಧ ಪಕ್ಷದ ನಾಯಕ ಸ್ಥಾನ ಖಾಲಿ ಇದೆ. ಆ ಸ್ಥಾನಕ್ಕೆ ಸಮರ್ಥರೆಂದು ತೋರಿಸಲು ಬಹುತೇಕ ಸದಸ್ಯರು ಎದ್ದು ನಿಂತು ಗದ್ದಲ ಮಾಡುತ್ತಿದ್ದಾರೆ. ಏನೇ ಇರಲಿ ಸಂವಿಧಾನಾತ್ಮಕ ಸ್ಥಾನ ಖಾಲಿ ಬಿಡಬಾರದು. ವಿಧಾನಸಭೆಯಲ್ಲಿ ಕುಮಾರಸ್ವಾಮಿ ನಾಯಕರಾಗುತ್ತಾರೆ. ಇಲ್ಲೂ ಬೇಗ ಸ್ಥಾನ ಭರ್ತಿ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಜಗದೀಶ ಶೆಟ್ಟರ್ ಅವರ ಹೈಕಮಾಂಡ್‌ ಆಯ್ಕೆ ಮಾಡುವವರಿಗೂ ಸ್ಥಾನ ಖಾಲಿ ಬಿಡುವುದು ಬೇಡ.  ಸಭಾಪತಿಗಳು ಬಿಜೆಪಿಯ ಎಲ್ಲರ ಹೆಸರು ಬರೆದು ಚೀಟಿ ಎತ್ತಲಿ. ಯಾರ ಹೆಸರು ಬರುತ್ತದೋ ಅವರನ್ನು ಅಧಿಕೃತ ಆಯ್ಕೆಯವರೆಗೂ ವಿರೋಧ ಪಕ್ಷದ ನಾಯಕರೆಂದು ಪರಿಗಣಿಸಲಿ ಎಂದರು. ಅವರ ಮಾತಿಗೆ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.