ADVERTISEMENT

ವಿಧಾನ ಮಂಡಲ ಅಧಿವೇಶನ | ಸದನ: ಮಾತು–ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 0:38 IST
Last Updated 14 ಆಗಸ್ಟ್ 2025, 0:38 IST
   
ವಿಧಾನಸೌಧ, ಶಾಸಕರ ಭವನಕ್ಕೂ ನಾಯಿ ಕಾಟ

‘ಶಾಸಕರ ಭವನದಿಂದ ಹೊರಗೆ ಬರಲು ಆಗುತ್ತಿಲ್ಲ ಸ್ವಾಮಿ. ಮ್ಯಾಟ್‌ ಮೇಲೆ ನಾಯಿಗಳು ಮಲಗಿರುತ್ತವೆ. ಅಲ್ಲೇ ಮಲ ವಿಸರ್ಜನೆ ಮಾಡುತ್ತವೆ. ಶಾಸಕರ ಭವನ ನಿಮ್ಮ ವ್ಯಾಪ್ತಿಗೆ ಬರುತ್ತದೆ. ಅಲ್ಲಿರುವ ಬೀದಿ ನಾಯಿಗಳನ್ನು ಓಡಿಸಿ’.

ಹೀಗೆಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ಅಳಲು ತೋಡಿಕೊಂಡವರು ಬಿಜೆಪಿಯ ಉಮಾನಾಥ ಕೋಟ್ಯಾನ್ ಅವರು.

ವಿಧಾನಸಭೆಯಲ್ಲಿ ಶೂನ್ಯವೇಳೆಗೂ ಮೊದಲು ಜೆಡಿಎಸ್‌ ಗುಂಪಿನ ನಾಯಕ ಸುರೇಶ್‌ಬಾಬು ಅವರು ಬೀದಿ ನಾಯಿಗಳ ಹಾವಳಿಯ ವಿಷಯ ಪ್ರಸ್ತಾಪಿಸಿದರು. ಆಗ ಶಾಸಕರು ಪಕ್ಷಭೇದ ಮರೆತು, ‘ವಿಧಾನಸೌಧ ಮತ್ತು ಶಾಸಕರ ಭವನದ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿಸಿ’ ಎಂದು ಸಭಾಧ್ಯಕ್ಷರಲ್ಲಿ ಮೊರೆ ಇಟ್ಟರು.

ADVERTISEMENT

‘ಬೀದಿ ನಾಯಿಗಳ ಕಾಟ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಪಾಲಿಕೆಗಳಿಗೆ ಆದೇಶ ಮಾಡಿ ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸುರೇಶ್‌ ಬಾಬು ಮನವಿ ಮಾಡಿದರು.

ಇದನ್ನು ಸಮರ್ಥಿಸಿದ ಬಿಜೆಪಿಯ ಎಸ್‌.ಸುರೇಶ್‌ಕುಮಾರ್, ‘ಸುಪ್ರೀಂ ಕೋರ್ಟ್‌ ಆದೇಶ ದೇಶವ್ಯಾಪಿ ಅನ್ವಯವಾಗುತ್ತದೆ. ಆರು ತಿಂಗಳಲ್ಲಿ ನಗರದಲ್ಲಿ ನಾಯಿ ಕಚ್ಚಿದ 18 ಸಾವಿರ ಪ್ರಕರಣಗಳು ವರದಿಯಾಗಿವೆ. 18 ಮಂದಿಗೆ ರೇಬಿಸ್‌ ಸೋಂಕು ಕಾಣಿಸಿಕೊಂಡಿದೆ’ ಎಂದು ಹೇಳಿದರು.

ಆಗ ಉಮಾನಾಥ್‌ ಕೋಟ್ಯಾನ್ ಅವರು, ‘ವಿಧಾನಸೌಧದ ಪಕ್ಕದಲ್ಲೇ ಇರುವ ಶಾಸಕರ ಭವನಕ್ಕೂ ನಾಯಿ ಕಾಟ ಇದೆ. ನಾವ್ಯಾರೂ ಶಾಸಕರ ಭವನದಿಂದ ಹೊರಗೆ ಬರಲು ಆಗುತ್ತಿಲ್ಲ’ ಎಂದರು.

ಸಚಿವ, ಶಾಸಕರೇ ಸೀಟ್‌ಬೆಲ್ಟ್‌ ಧರಿಸಲ್ಲ

ರಾಜ್ಯದಲ್ಲಿನ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷವೂ ಸುಮಾರು 10 ಸಾವಿರ ಮಂದಿ ಮೃತರಾಗುತ್ತಿರುವ ವಿಷಯ ಕುರಿತು ವಿಧಾನಪರಿಷತ್‌ನಲ್ಲಿ ಗಂಭೀರ ಚರ್ಚೆ ನಡೆಯಿತು.

ಬಿಜೆಪಿಯ ಕೆ.ಎಸ್‌. ನವೀನ್‌ ಅವರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಉತ್ತರಲ್ಲಿನ ಅಂಕಿಅಂಶಗಳನ್ನು ನೋಡಿ ಸದನದ ಸದಸ್ಯರು ಗಾಬರಿಯಾದರು. ರಸ್ತೆ ಗುಂಡಿಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚಬೇಕು. ವಾಹನ ದಟ್ಟಣೆ ಇರುವ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಅಗತ್ಯ ಇರುವ ಕಡೆ ರಸ್ತೆ ವಿಸ್ತರಣೆ ಮಾಡಬೇಕು. ಅತಿ ವೇಗಕ್ಕೆ ಕಡಿವಾಣ ಹಾಕಬೇಕು. ಹೆದ್ದಾರಿಗಳಲ್ಲೂ ವೇಗಮಿತಿ ಕಡ್ಡಾಯಗೊಳಿಸಬೇಕು. ಟೋಲ್‌ಗಳ ಮಧ್ಯೆ ಸಂಚರಿಸುವ ಸಮಯ ನಿಗದಿ ಮಾಡಿ, ನಿಗದಿತ ಸಮಯಕ್ಕಿಂತ ಮುಂಚೆ ತಲುಪುವ ವಾಹನಗಳಿಗೆ ದಂಡ ವಿಧಿಸಬೇಕು.. ಹೀಗೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು.

ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಬೈಕ್‌ ಮತ್ತು ಕಾರು ಅಪಘಾತಗಳಲ್ಲೇ ಅಧಿಕ ಸಂಖ್ಯೆಯಲ್ಲಿ ಮೃತರಾಗುತ್ತಿದ್ದಾರೆ. ಹೆಲ್ಮೆಟ್‌, ಸೀಟ್‌ಬೆಲ್ಟ್‌ ಕಡ್ಡಾಯಗೊಳಿಸಿದರೂ ಪಾಲನೆ ಆಗುತ್ತಿಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್‌ನ ಎಸ್‌.ಎಲ್‌. ಬೋಜೇಗೌಡ, ‘ನಮ್ಮ ಸಚಿವರು, ಶಾಸಕರು ಐಷಾರಾಮಿ ಕಾರುಗಳಲ್ಲಿ ಮುಂದೆ ಕಳಿತು ಪ್ರಯಾಣ ಮಾಡುತ್ತಾರೆ. ಯಾರೂ ಸೀಟ್‌ಬೆಲ್ಟ್‌ ಹಾಕುವುದೇ ಇಲ್ಲ. ಮೊದಲು ಇಲ್ಲಿಂದಲೇ ನಿಯಮ ಪಾಲನೆ ಆಗಬೇಕು’ ಎಂದು ಚರ್ಚೆಗೆ ತೆರೆ ಎಳೆದರು.

‘ಲೋಕಸಭೆಯಲ್ಲಿ ಮಾತನಾಡಬೇಕು ‌ಅಂದಿದ್ರಿ’

ರಸಗೊಬ್ಬರ ಕೊರತೆ ಕುರಿತು ಆಡಳಿತ– ವಿರೋಧ ಪಕ್ಷಗಳ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಚುನಾವಣಾ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ್ದು ಕೆಲಹೊತ್ತು ಸ್ವಾರಸ್ಯಕರ ಚರ್ಚೆಗೆ ವಸ್ತುವಾಯಿತು.

‘ನಾನು ಒಂಬತ್ತು ವಿಧಾನಸಭೆ ಚುನಾವಣೆ ಎದುರಿಸಿದ್ದೇನೆ. ಡಿ.ಕೆ. ಶಿವಕುಮಾರ್ ಎಂಟು ಚುನಾವಣೆ ಎದುರಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಾಗ, ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಇಲ್ಲ ಸರ್. ಡಿ.ಕೆ. ಶಿವಕುಮಾರ್ ಒಂಬತ್ತು ಚುನಾವಣೆ’ ಎಂದರು.

‘ಚುನಾವಣೆ ಎದುರಿಸಿದ ಲೆಕ್ಕ ಹಾಕಿದರೆ ನಾನು 13 ಬಾರಿ ಎದುರಿಸಿದ್ದೇನೆ. ಎರಡು ಬಾರಿ ಲೋಕಸಭೆ, ಎರಡು ಬಾರಿ ವಿಧಾನಸಭೆ ಚುನಾವಣೆ ಸೋತಿದ್ದೇನೆ’ ಎಂದು ಮುಖ್ಯಮಂತ್ರಿ ಸಮಜಾಯಿಶಿ ನೀಡಿದರು.

ಆಗ ಅಶೋಕ, ‘ನೀವು ಲೋಕಸಭೆಗೆ ಹೋಗಿ’ ಎಂದರು. ‘ಯಾಕಪ್ಪ... ನನ್ನನ್ನು ಕಳುಹಿಸುವ ಯೋಚನೆ ಇದೆಯಾ’ ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಕೇಳಿದರು. ಆಗ ಇಡೀ ಸದನದಲ್ಲಿ ನಗೆ ಉಕ್ಕಿತು.

‘ನೀವೇ ಹಿಂದೊಮ್ಮೆ ಹೇಳಿದ್ರಿ. ಲೋಕಸಭೆಯಲ್ಲಿ ಮಾತನಾಡಬೇಕು ಅಂತ ಅಂದಿದ್ರಿ’ ಎಂದು ಅಶೋಕ ನೆನಪಿಸಿದರು. ‘ಈ ಹಿಂದೆ ಸಂಸತ್‌ಗೆ ಹೋಗಬೇಕು ಅನ್ನೋ ಆಸೆ ಇತ್ತು. ಈಗ ಅದು ಇಲ್ಲ. ಎರಡು ಸಲ ನನ್ನನ್ನು ಜನ ರಿಜೆಕ್ಟ್ ಮಾಡಿದ್ದಾರೆ. ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತದೆ. ಆಸೆ ತಪ್ಪೇನಲ್ಲ. ಆಸೆ ಇರಬೇಕು. ದುರಾಸೆ ಇರಬಾರದು. ಆಸೆಯೇ ದುಃಖಕ್ಕೆ ಮೂಲ’ ಎಂದು ಸೂಚ್ಯವಾಗಿ ಹೇಳಿದರು.

ಪಕ್ಕದ ಆಸನದಲ್ಲಿದ್ದ ಡಿ.ಕೆ. ಶಿವಕುಮಾರ್‌ ನಸು ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.