
ವಿಧಾನಸೌಧ
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಬುಧವಾರ ನಡೆದ ಬಜೆಟ್ ಮೇಲಿನ ಚರ್ಚೆ ರಾಜಕೀಯ ಪಕ್ಷಗಳ ಸೋಲು–ಗೆಲುವು ಕುರಿತು ಪರಸ್ಪರ ಆರೋಪ–ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು.
ಜೆಡಿಎಸ್‌ನ ಟಿ.ಎ.ಶರವಣ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಯೋಜನೆಯ ವಿಷಯಗಳನ್ನು ಬಿಟ್ಟು, ಬೇರೆ ವಿಷಯಗಳೇ ಇಲ್ಲ. ಅದೂ ಜಾಹೀರಾತಿಗಷ್ಟೇ ಸೀಮಿತವಾಗಿದೆ ಎಂದು ಹೇಳಿದ್ದು, ಕಾಂಗ್ರೆಸ್‌ನ ಎಸ್.ರವಿ ಅವರನ್ನು ಕೆರಳಿಸಿತು. ‘ಸುಮ್ಮನೆ ಶರವಣ ಅವರಿಗೆ ಕೇಸರಿ ಶಾಲು ಹಾಕಿ ಬಿಡಿ. ಕಳೆದ ಚುನಾವಣೆಗೂ ಮೊದಲು ಹಿಜಾಬ್, ಹಲಾಲ್, ಪಾಕಿಸ್ತಾನ, ಮುಸ್ಲಿಂ ವಿಷಯಗಳನ್ನೇ ಕೆದಕಿ ಬಿಜೆಪಿ 66 ಸ್ಥಾನಗಳಿಗೆ ಕುಸಿದಿದೆ. ಈಗ ಜೆಡಿಎಸ್ ಅದೇ ಹಾದಿ ಹಿಡಿದಿದೆ. ಹೀಗೆ ಆದರೆ ಮುಂದಿನ ಚುನಾವಣೆಯಲ್ಲಿ ಮಿತ್ರ ಪಕ್ಷಗಳಿಗೆ 35 ಸ್ಥಾನಗಳೂ ಬರುವುದಿಲ್ಲ’ ಎಂದು ಟೀಕಿಸಿದರು.
‘ಮೊದಲು ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ನೋಡಿ. ಸಂಸತ್‌ನಲ್ಲಿ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿಲ್ಲ’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಮಂಡ್ಯದಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈ ಬಾರಿ ಯಾರನ್ನು ಗೆಲ್ಲಿಸಿಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.
‘ಮಗ ಕ್ಷೇತ್ರ ಬಿಟ್ಟು ಕೊಡದೇ ಇದ್ದಿದ್ದರೆ ನಿಮ್ಮ ಸಿದ್ದರಾಮಯ್ಯ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ’ ಬಿಡಿ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚರ್ಚೆಯ ಮಧ್ಯೆ ಎನ್. ರವಿಕುಮಾರ್ ಮತ್ತೆ ಪಾಕಿಸ್ತಾನ ವಿಷಯ ಪ್ರಸ್ತಾಪಿಸಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕೆರಳಿಸಿತು. ‘ನಿಮ್ಮ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದರಾ? ಬಿರಿಯಾನಿ ತಿಂದರಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.