ADVERTISEMENT

ಕೋವಿಡ್‌ನಿಂದ ಉದ್ಯೋಗ ಸೃಜನೆ ಕುಂಠಿತ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:59 IST
Last Updated 21 ಡಿಸೆಂಬರ್ 2021, 19:59 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಳಗಾವಿ: ಕೋವಿಡ್‌ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಸೃಜನೆ ಕುಂಠಿತವಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ 95 ಬೃಹತ್‌ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ₹ 25,253 ಕೋಟಿ ಹೂಡಿಕೆಯಾಗಿದೆ. 1,16,151 ಉದ್ಯೋಗಗಳು ಸೃಜನೆಯಾಗಿವೆ ಎಂದರು.

‘2018–19ರಿಂದ 2020ರ ಜೂನ್‌ ಅಂತ್ಯದವರೆಗೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ₹ 51,560 ಕೋಟಿ ಹೂಡಿಕೆಯ ಪ್ರಸ್ತಾವಗಳ ನೋಂದಣಿಯಾಗಿದೆ. ಅವುಗಳಿಂದ 18.28 ಲಕ್ಷ ಉದ್ಯೋಗ ಸೃಜನೆಯಾಗಬೇಕಿತ್ತು. ಬೃಹತ್‌ ಕೈಗಾರಿಕಾ ಕ್ಷೇತ್ರದಲ್ಲಿ ₹ 1.14 ಲಕ್ಷ ಕೋಟಿ ಹೂಡಿಕ ಪ್ರಸ್ತಾವಗಳು ನೋಂದಣಿಯಾಗಿದ್ದು, 2.88 ಲಕ್ಷ ಉದ್ಯೋಗ ಸೃಷ್ಟಿಯಾಗಬೇಕಿತ್ತು’ ಎಂದು ತಿಳಿಸಿದರು.

ADVERTISEMENT

‘ದಾಖಲೆಗಳಲ್ಲಿ ಇರುವಂತೆ ವಾಸ್ತವವಾಗಿ ಉದ್ಯೋಗ ಸೃಜನೆಯಾಗಿಲ್ಲ’ ಎಂದು ವೆಂಕಟೇಶ್‌ ಆಕ್ಷೇಪಿಸಿದರು. ಅದಕ್ಕೆ ನಿರಾಣಿ, ‘ಕೋವಿಡ್‌ನಿಂದ ಕುಂಠಿತವಾಗಿರುವುದು ನಿಜ. ಸುಧಾರಿಸುವ ಹಂತಕ್ಕೆ ಬಂದಿತ್ತು. ಆದರೆ, ಮತ್ತೆ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದರಿಂದ ಪುನಃ ಆತಂಕದ ಛಾಯೆ ಕಾಣುತ್ತಿದೆ’ ಎಂದು ಹೇಳಿದರು.

ಗ್ರಾನೈಟ್‌: ₹ 373 ಕೋಟಿ ರಾಜಧನ
2017–18ರಿಂದ 2021ರ ಅಕ್ಟೋಬರ್‌ ಅಂತ್ಯದವರೆಗೆ ರಾಜ್ಯದಲ್ಲಿ 17.61 ಲಕ್ಷ ಘನ ಮೀಟರ್‌ ಗ್ರಾನೈಟ್‌ ಉತ್ಪಾದನೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ಬಿಜೆಪಿಯ ಡಾ.ತೇಜಸ್ವಿನಿ ಗೌಡ ಪ್ರಶ್ನೆಗೆ ಅವರು, ‘ರಾಜ್ಯದಲ್ಲಿ 581 ಗ್ರಾನೈಟ್‌ ಕ್ವಾರಿಗಳಿವೆ. 2017–18ರಿಂದ 2021ರ ಅಕ್ಟೋಬರ್‌ ಅಂತ್ಯದವರೆಗೆ 12.72 ಲಕ್ಷ ಘನ ಮೀಟರ್‌ ಗ್ರಾನೈಟ್‌ ಅನ್ನು ಸ್ಥಳೀಯವಾಗಿ ಮಾರಲಾಗಿದೆ. 4.89 ಲಕ್ಷ ಘನ ಮೀಟರ್‌ ಗ್ರಾನೈಟ್‌ ರಫ್ತು ಮಾಡಲಾಗಿದೆ. ಗ್ರಾನೈಟ್ ಮಾರಾಟದಿಂದ ₹ 372.98 ಕೋಟಿ ರಾಜಧನ ಸಂಗ್ರಹವಾಗಿದೆ’ ಎಂದರು.

ಕಲ್ಲುಗಣಿ ಗುತ್ತಿಗೆ– 5000 ಅರ್ಜಿ ಬಾಕಿ: ಕಲ್ಲು ಗಣಿಗಳ ಗುತ್ತಿಗೆ ಕೋರಿ ಸಲ್ಲಿಸಿರುವ 5,000 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿಜೆಪಿಯ ಮುನಿರಾಜು ಗೌಡ ಪಿ.ಎಂ. ಪ್ರಶ್ನೆಗೆ ಅವರು, ‘2016ರಲ್ಲಿ ಉಪ ಖನಿಜ ನಿಯಮಗಳಿಗೆ ತಿದ್ದುಪಡಿ ತರುವ ಮುನ್ನವೇ ಸಲ್ಲಿಕೆಯಾಗಿದ್ದ ಅರ್ಜಿಗಳು ಬಾಕಿ ಇವೆ. ಬಾಕಿ ಅರ್ಜಿಗಳ ವಿಲೇವಾರಿಗೆ ಮಾರ್ಗಸೂಚಿ ರೂಪಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.