ADVERTISEMENT

ಬಡ ರೈತರಿಗೆ ರಕ್ಷಣೆ: ಭೂ ಕಾಯ್ದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 22:29 IST
Last Updated 12 ಮಾರ್ಚ್ 2020, 22:29 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉದ್ದೇಶಕ್ಕಾಗಿ ಸಣ್ಣ ಪ್ರಮಾಣದಲ್ಲಿ ಭೂ ಒತ್ತುವರಿ ಮಾಡಿರುವ ರೈತರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಕೈ ಬಿಡಲು ಭೂ ಕಂದಾಯ ಅಧಿನಿಯಮ 192 ಎ ಕಾಯ್ದೆಗೆ ಇದೇ ಅಧಿವೇಶನದಲ್ಲಿ ತಿದ್ದುಪಡಿ ತರುವುದಾಗಿ ಕಂದಾಯ ಸಚಿವ ಆರ್‌.ಅಶೋಕ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಮತ್ತು ಕುಮಾರ್‌ ಬಂಗಾರಪ್ಪ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರ ನೀಡಿ ಈ ವಿಷಯ ತಿಳಿಸಿದರು.

ಬೆಂಗಳೂರು ಹೊರತುಪಡಿಸಿ ಉಳಿದ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯ 18 ಕಿ.ಮೀ ಆಚೆ ಬರುವ ಪ್ರದೇಶದಲ್ಲಿ ಒತ್ತುವರಿ ಆದ ಭೂಮಿಯನ್ನು 192 ಎ ಯಿಂದ ಮೊಕದ್ದಮೆ ಕೈಬಿಡಲು ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ಅಶೋಕ್‌ ಹೇಳಿದರು.

ADVERTISEMENT

ಹರತಾಳು ಹಾಲಪ್ಪ ಮಾತನಾಡಿ, ‘ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಭೂಕಬಳಿಕೆ ನಿಷೇಧಕ್ಕಾಗಿ ಭೂಕಂದಾಯ ಅಧಿನಿಯಮ 192 ಎ ಜಾರಿಗೆ ತರಲಾಯಿತು. ಸರ್ಕಾರಿ ಭೂಕಬಳಿಕೆದಾರರು, ಭೂಮಾಫಿಯಾ ಮತ್ತು ಹೌಸಿಂಗ್‌ ಸೊಸೈಟಿಗಳನ್ನು
ಮಟ್ಟ ಹಾಕುವುದು ಉದ್ದೇಶವಾಗಿತ್ತು. ಆದರೆ, ಇದರಿಂದ ಅನ್ಯಾಯಕ್ಕೆ ಒಳಗಾದವರು ಮಲೆನಾಡು ಭಾಗದ ರೈತರು’ ಎಂದು ಹೇಳಿದರು.

‘ಸಾವಿರಾರು ರೈತರ ಮೇಲೆ ಮೊಕದ್ದಮೆ ಹೂಡಲಾಗಿದೆ. ಇದಕ್ಕೆ ಸಂಬಂಧಿಸಿದ ನ್ಯಾಯಾಲಯ ಬೆಂಗಳೂರಿನಲ್ಲಿ ಇರುವುದರಿಂದ ಬೆಂಗಳೂರಿಗೆ ಬಂದು ಅಲೆದಾಡುವಂತಾಗಿದೆ’ ಎಂದರು.

ಆರಗ ಜ್ಞಾನೇಂದ್ರ ಮಾತನಾಡಿ, ‘ತೀರ್ಥಹಳ್ಳಿ ತಾಲ್ಲೂಕಿನಲ್ಲಿ 3,000 ರೈತರ ಮೇಲೆ ಮೊಕದ್ದಮೆ ಹೂಡಿ ಎಫ್‌ಐಆರ್‌ ದಾಖಲಿಸಲಾಗಿದೆ. ರೈತರು 2 ರಿಂದ 3 ಗುಂಟೆ ಒತ್ತುವರಿ ಮಾಡಿದ್ದಕ್ಕಾಗಿ ಕೇಸುಗಳನ್ನು ಹಾಕಲಾಗಿದೆ. ಬಸ್ ಚಾರ್ಜ್‌ಗೇ ಗತಿ ಇಲ್ಲದ ಈ ರೈತರು ಬೆಂಗಳೂರಿಗೆ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಈ ಬಡ ರೈತರ ನೆರವಿಗೆ ಮುಖ್ಯಮಂತ್ರಿಯವರೇ ಧಾವಿಸಬೇಕು. ನಿಮ್ಮಿಂದ ಮಾತ್ರ ರಕ್ಷಣೆ ಸಾಧ್ಯ’ ಎಂದು ಹೇಳಿದರು.

ಕುಮಾರ್‌ ಬಂಗಾರಪ್ಪ ಮಾತನಾಡಿ, ‘ರೈತರು ಸಂಕಷ್ಟಕ್ಕೆ ಸಿಲುಕಲು ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ
ಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.