ADVERTISEMENT

ವಿಧಾನ ಮಂಡಲ | ಸಿ.ಎಂ ಮೂಗಿನಡಿ ದಲಿತರ ಹಣ ಲೂಟಿ: ಆರ್‌. ಅಶೋಕ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಉಭಯ ಸದನಗಳಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 19:19 IST
Last Updated 15 ಜುಲೈ 2024, 19:19 IST
ವಿಧಾನಸಭೆಯಲ್ಲಿ ಆರ್‌.ಅಶೋಕ ಮಾತನಾಡಿದರು.
ವಿಧಾನಸಭೆಯಲ್ಲಿ ಆರ್‌.ಅಶೋಕ ಮಾತನಾಡಿದರು.   

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಲೂಟಿ ಪೂರ್ವಯೋಜಿತ ಸಂಚು. ದಲಿತರ ಹಣವನ್ನು ಚುನಾವಣೆಗಾಗಿ ಗೋಲ್‌ಮಾಲ್‌ ಮಾಡಿ ಲಪಟಾಯಿಸಲಾಗಿದೆ. ದಲಿತರ ಶಾಪ ನಿಮಗೆ ತಟ್ಟದೇ ಬಿಡದು’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ ಪ್ರಸ್ತಾಪಗೊಂಡಿತು. ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಪ್ರಸ್ತಾಪಕ್ಕೆ ಅವಕಾಶ ನೀಡದೇ ನಿಯಮ 69ರ ಅಡಿ ಚರ್ಚೆಗೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅನುಮತಿ ನೀಡಿದರು.

ಆವೇಶ ಭರಿತರಾಗಿಯೇ ಚರ್ಚೆ ಆರಂಭಿಸಿದ ಅಶೋಕ, ‘ಈ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಅವರ ಮೂಗಿನ ಅಡಿಯೇ, ಅವರ ಇಲಾಖೆ ವ್ಯಾಪ್ತಿಯಲ್ಲೇ ಹಗರಣ ನಡೆದರೂ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕೈಚೆಲ್ಲಿ ಕೂತಿದ್ದಾರೆ. ಹಗರಣದ ಮೊತ್ತ ಸಣ್ಣದಲ್ಲ. ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುವ ಇವರು ದಲಿತರ ಹಣದ ಲೂಟಿಯ ಕೆಲಸಕ್ಕೆ ಅವಕಾಶ ಕೊಟ್ಟಿದ್ದು ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

ಶಾಂಗ್ರಿ–ಲಾದಲ್ಲೇ ಸಂಚು:

‘ಹಗರಣ ನಡೆಸಿ ಅದನ್ನು ಮುಚ್ಚಿ ಹಾಕಲು ಮೊದಲೇ ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ನಕಲಿ ಫಲಾನುಭವಿಗಳ ಪಟ್ಟಿಯನ್ನೂ ತಯಾರಿಸಿಕೊಂಡಿದ್ದರು. ಫಲಾನುಭವಿಗಳಿಗೆ ಯಾವುದಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಮೊತ್ತವನ್ನೂ ನಮೂದಿಸಿಕೊಂಡಿದ್ದರು. ಹಗರಣ ಬಯಲಿಗೆ ಬರದಿದ್ದರೆ, ಈ ಪಟ್ಟಿಯನ್ನು ಬಿಡುಗಡೆ ಮಾಡಿ ನೆಮ್ಮದಿಯಿಂದ ಇರುತ್ತಿದ್ದರು. ಶಾಂಗ್ರಿ–ಲಾ ಹೊಟೇಲ್‌ನಲ್ಲಿ ಈ ಹಗರಣದ ಸಂಚು ರೂಪಿಸಲಾಗಿತ್ತು. ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ಕೂಡ ಈ ಹಗರಣದ ಬಗ್ಗೆ ಮಾತನಾಡಿದ್ದು, ಬಿಜೆಪಿಯವರು ಸುಮ್ಮನಿದ್ದರೂ ನಾನು ಸುಮ್ಮನಿರುವುದಿಲ್ಲ ಎಂದಿದ್ದಾರೆ’ ಎಂದು ಹೇಳಿದರು.

ಹಗರಣದಿಂದ ಬಚಾವಾಗುವ ಕುರಿತು ನಿಗಮದ ಅಧಿಕಾರಿಗಳಾದ ಪರಶುರಾಮ್‌ ಮತ್ತು ಪದ್ಮನಾಭ್ ನಡೆಸಿರುವ ದೂರವಾಣಿ ಸಂಭಾಷಣೆಯ ವಿವರವನ್ನು ಅಶೋಕ ಸದನದಲ್ಲಿ ಓದಿದರು.

ಆರಂಭದಲ್ಲಿ ಪ್ರಶ್ನೋತ್ತರ ಬದಿಗೊತ್ತಿ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಮಾತಿನ ಸಮರ ನಡೆಯಿತು. ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಮುಡಾದಲ್ಲಿ ಫಿಫ್ಟಿ ಫಿಫ್ಟಿ ಹಂಚಿಕೆ ಆದ ಮಾದರಿಯಲ್ಲಿ ₹187 ಕೋಟಿಯಲ್ಲಿ ಯಾರ್‍ಯಾರಿಗೆ ಎಷ್ಟು ಹಂಚಿಕೆ ಆಗಿದೆ ಎಂದು ಹೇಳಿ?
– ವಿ.ಸುನಿಲ್‌ ಕುಮಾರ್‌ ಬಿಜೆಪಿ
ಅಶೋಕ ಅವರೇ ನಿಮ್ಮನ್ನು ಲೀಡರ್‌ಶಿಪ್‌ನಿಂದ ತೆಗೆಯುತ್ತಾರೆ ಅಂತ ಸುದ್ದಿ ಇತ್ತು. ಇವತ್ತು ಚೆನ್ನಾಗಿ ಮಾತನಾಡಿದ್ದೀರಿ ನಿಮ್ಮನ್ನು ನಾಯಕರಾಗಿ ಮುಂದುವರೆಸುತ್ತಾರೆ ಬಿಡಿ
–ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ
ಈ ಹಗರಣದ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಸಿಎಂ ಹಗರಣ ನಡೆದಿದೆ ಎಂದರೆ ಡಿಸಿಎಂ ಏನೂ ಆಗಿಲ್ಲ ಹಣ ಎಲ್ಲೂ ಹೋಗಿಲ್ಲ ಎನ್ನುತ್ತಾರೆ.
–ಆರ್‌.ಅಶೋಕ, ವಿರೋಧಪಕ್ಷದ ನಾಯಕ
ಹೊಂದಾಣಿಕೆ ರಾಜಕಾರಣ ಬೇಡ ಎರಡೂ ಪಕ್ಷಗಳು ಸ್ವಚ್ಛವಾಗಬೇಕು. ಹಗರಣಗಳನ್ನು ಸಿಬಿಐ ತನಿಖೆಗೆ ಕೊಡಿ ಎಲ್ಲವೂ ಸರಿ ಹೋಗುತ್ತದೆ
–ಬಸನಗೌಡ ಪಾಟೀಲ, ಯತ್ನಾಳ ಬಿಜೆಪಿ

‘ಹಗರಣದ ಸತ್ಯ– ಸುಳ್ಳು ಸದನದಲ್ಲೇ ಬಯಲು ಮಾಡುತ್ತೇನೆ’

‘ವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ? ಎಷ್ಟು ಸುಳ್ಳು ಎಂಬುದನ್ನು ಈ ಸದನದಲ್ಲೇ ನಾವು ಬಯಲು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅಶೋಕ ಅವರು ಮಾತನಾಡುವಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ‘ರಾಜಕೀಯ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ’ ಎಂದು ತಿರುಗೇಟು ನೀಡಿದರು. ‘ಬಿಜೆಪಿ ಮತ್ತು ಜೆಡಿಎಸ್‌ ನಾಯಕರೇ ನಿಮ್ಮ ಪ್ರತಿ ಮಾತಿಗೂ ನನ್ನ ಬಳಿ ಉತ್ತರವಿದೆ. ಇಷ್ಟು ದಿನ ಮಾಧ್ಯಮಗಳ ಎದುರು ಸುಳ್ಳು ಹೇಳುತ್ತಾ ದೂರದಲ್ಲೆಲ್ಲೋ ನಿಂತು ಗಾಳಿಯಲ್ಲಿ ಗುಂಡು ಹೊಡೆದಂತಲ್ಲ. ಇದು ಸದನ ಇಲ್ಲಿ ನಿಮ್ಮ ಹಿಟ್‌ ಆ್ಯಂಡ್‌ ರನ್‌ ಗೆ ಅವಕಾಶವಿಲ್ಲ’ ಎಂದರು.

‘ಎನ್‌ಟಿಟಿ ಕಣ್ತಪಿಸಿ ಹಣ ಹೋಗಿದ್ದು ಹೇಗೆ?’

‘ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗಳಿಗಾಗಿ ನೀಡಬೇಕಾಗಿದ್ದ ಹಣವನ್ನು ವಂಚಿಸಿ ಬೇನಾಮಿ ಖಾತೆಗಳಿಗೆ ರವಾನಿಸಿ ದುರ್ಬಳಕೆ ಮಾಡಲಾಗಿದೆ. ವೈನ್‌ ಶಾಪ್‌ಗಳು ಚಿನ್ನಾಭರಣ ಅಂಗಡಿಗಳ ಮೂಲಕ ಆ ಹಣ ನಗದೀಕರಿಸಿ ಚುನಾವಣೆಗೆ ಬಳಸಲಾಗಿದೆ. ರಾಜ್ಯದಲ್ಲಿ 2017ರಲ್ಲೇ ಎನ್‌ಟಿಟಿ (ನಾನ್‌ ಟ್ರಝರಿ ಟ್ರಾನ್ಸಾಕ್ಷನ್‌) ವ್ಯವಸ್ಥೆ ಜಾರಿಯಲ್ಲಿದೆ. ಯಾವುದೇ ಇಲಾಖೆ ನಿಗಮ–ಮಂಡಳಿಗಳಿಂದ ಒಂದು ಪೈಸೆ ವರ್ಗಾವಣೆ ಆದರೂ ಎನ್‌ಟಿಟಿ ಮೂಲಕ ಅದು ಹಣಕಾಸು ಇಲಾಖೆಯ ಗಮನಕ್ಕೆ ಬಂದೇ ಬರುತ್ತದೆ. ಆದರೆ ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಮತ್ತು ಆ ಇಲಾಖೆಯ ಅಧಿಕಾರಿಗಳಿಗೆ ಹಣ ವರ್ಗಾವಣೆ ಆಗಿದ್ದು ಗೊತ್ತೇ ಇಲ್ಲ ಎಂದರೆ ನಂಬಲು ಸಾಧ್ಯವೇ’ ಎಂದು ಅಶೋಕ ಪ್ರಶ್ನಿಸಿದರು.

ಪರಿಷತ್ತಿನಲ್ಲಿ ಆಡಳಿತ– ವಿರೋಧ ಪಕ್ಷಗಳ ವಾಗ್ವಾದ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಮೇಲಿನ ಚರ್ಚೆ ವಿಧಾನ ಪರಿಷತ್‌ನಲ್ಲೂ ಸೋಮವಾರ ಆಡಳಿತ–ವಿರೋಧ ಪಕ್ಷದ ಮಧ್ಯೆ ವಾಗ್ವಾದಕ್ಕೆ ನಾಂದಿ ಹಾಡಿತು. ಶೂನ್ಯವೇಳೆಯ ನಂತರ ಈ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಬಿಜೆಪಿಯ ಸಿ.ಟಿ. ರವಿ ಪಟ್ಟು ಹಿಡಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವ ಜಿ. ಪರಮೇಶ್ವರ ಪ್ರಕರಣದ ವಿಚಾರಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ ರಚಿಸಿದೆ. ರಾಜ್ಯ ಸರ್ಕಾರದ ಗಮನಕ್ಕೂ ತಾರದೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಸಿಬಿಐ ಮಧ್ಯ ಪ್ರವೇಶಿಸಿದೆ. ಇಂತಹ ಸಮಯದಲ್ಲಿ ಚರ್ಚೆಗೆ ಅವಕಾಶ ನೀಡುವುದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು. ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ಸದಸ್ಯರು ಸಭಾಪತಿ ಪೀಠದ ಮುಂದೆ ಬಂದು ಪ್ರತಿಭಟನೆ ನಡೆಸಿದರು. ಸಭಾಪತಿ ಬಸವರಾಜ ಹೊರಟ್ಟಿ ಎರಡು ಬಾರಿ ಸದನವನ್ನು ಮುಂದೂಡಿದ ನಂತರ ಅಡ್ವೋಕೇಟ್‌ ಜನರಲ್‌ ಸಲಹೆ ಪಡೆದರು. ಮತ್ತೆ ಸದನ ಆರಂಭವಾದಾಗ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಹಗರಣದ ಸಂಚು ರೂಪುಗೊಂಡ ಬಗೆಯನ್ನು ಸಿ.ಟಿ. ರವಿ ವಿವರಿಸುವಾಗ ‘ಲೂಟಿ’ ‘ಅಹಿಂದ’ ಪದ ಬಳಸಿದ್ದಕ್ಕೆ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. ಸಚಿವರು ಕಾಂಗ್ರೆಸ್‌ ಸದಸ್ಯರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಆಕ್ಷೇಪಾರ್ಹ ಮಾತುಗಳನ್ನು ಕಡತದಿಂದ ತೆಗೆಸಿ ಹಾಕಿದ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. 

ಈಗ ಬಂದಿಯಾ ಸುಮ್ಮನಿರು!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಮೇಲಿನ ಚರ್ಚೆಗೆ ಪಟ್ಟು ಹಿಡಿದ ಸಿ.ಟಿ. ರವಿ ವರ್ತನೆಗೆ ಸಿಟ್ಟಾದ ಸಭಾಪತಿ ಬಸವರಾಜ ಹೊರಟ್ಟಿ ‘ವಿಧಾನ ಪರಿಷತ್‌ಗೆ ನೀನು ಈಗ ಬಂದಿಯಾ ಸುಮ್ಮನಿರು’ ಎಂದರು. ಹೊರಟ್ಟಿ ಮಾತಿಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ‘20 ವರ್ಷಗಳಿಂದ ವಿಧಾನಸಭೆಯಲ್ಲಿ ಇದ್ದೀನಿ. ವಿಧಾನ ಪರಿಷತ್ತು ಹೊಸದು ಅಷ್ಟೇ’ ಎಂದು ಹೇಳಿದರು. ನಡುವೆ ಬಾಯಿ ಹಾಕಿದ ಜೆಡಿಎಸ್‌ನ ಎಸ್‌.ಎಲ್‌. ಬೋಜೇಗೌಡರನ್ನೂ ಗದರಿದ ಹೊರಟ್ಟಿ ‘ಬೇರೆಯವರಿಗೆ ಟೋಪಿ ಹಾಕಿದಂಗೆ ನನಗೆ ಹಾಕಲು ಬರಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.