ADVERTISEMENT

ಸದನದ ಮಾತು–ಗಮ್ಮತ್ತು; ‘ನಾನು ಕ್ರಿಕೆಟ್‌ ಫ್ಯಾನ್ ಅಲ್ಲ; ಕಬಡ್ಡಿ ಆಟಗಾರ’– ಸಿಎಂ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 0:39 IST
Last Updated 23 ಆಗಸ್ಟ್ 2025, 0:39 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

‘ಕ್ರಿಕೆಟ್‌ ಫ್ಯಾನ್ ಅಲ್ಲ; ಕಬ್ಬಡಿ ಆಟಗಾರ’

‘ನಾನು ಕ್ರಿಕೆಟ್‌ ಆಡಿಲ್ಲ. ಕ್ರಿಕೆಟ್‌ ಫ್ಯಾನ್ ಅಲ್ಲ. ಆದರೆ, ಕ್ರಿಕೆಟ್‌ ಫಾಲೋವರ್‌ ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಚರ್ಚೆ ವೇಳೆ ಹೇಳಿದರು.

ADVERTISEMENT

‘ನಾನು ಯಾವತ್ತೂ ಕ್ರಿಕೆಟ್‌ ಆಡಿಲ್ಲ. ಆದರೆ, ಕಬ್ಬಡಿ ಆಟಗಾರ. 2005 ಅಂತ ಕಾಣುತ್ತೆ ಶಾಸಕರ ದಿನಾಚರಣೆ ಸಂದರ್ಭದಲ್ಲಿ ಕಬ್ಬಡಿ ಆಡುವಾಗ ಸಕಲೇಶಪುರದ ಅಂದಿನ ಶಾಸಕ ವಿಶ್ವನಾಥ್‌ ನನ್ನ ಮೇಲೆ ಬಿದ್ದರು. ಅವರದು ದೊಡ್ಡ ದೇಹ, ಅದರಿಂದ ನನ್ನ ಮಂಡಿಗೆ ಪೆಟ್ಟಾಯಿತು. ಅದೇ ವೇಳೆ ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಿದರು. ಆಗ ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶಕ್ಕೆ ಕುಂಟಿಕೊಂಡೇ ಹೋಗಿದ್ದೆ’ ಎಂದರು.

‘ಆರ್‌ಸಿಬಿ ವಿಜಯೋತ್ಸವಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ನೀವು (ಬಿಜೆಪಿ) ಪರಮೇಶ್ವರ ಅವರನ್ನು ಶಕ್ತಿ ಇಲ್ಲದ, ಅಸಮರ್ಥ ಗೃಹ ಮಂತ್ರಿ ಎಂದು ‘ಎಕ್ಸ್‌’ ಮಾಡಿದ್ದೀರಿ’ ಎಂದು ಸಿದ್ದರಾಮಯ್ಯ ಹೇಳಿದಾಗ, ಪರಮೇಶ್ವರ ಕಿರು ನಗೆ ಬೀರಿದರು. ಅಶೋಕ ಅವರೂ ಪರಮೇಶ್ವರ ಅವರನ್ನು ನೋಡಿ ನಕ್ಕರು. ಇದನ್ನು ಗಮನಿಸಿದ ಮುಖ್ಯಮಂತ್ರಿ, ‘ಯಾಕೆ ಅಶೋಕ, ಪರಮೇಶ್ವರ ಅವರು ಆರ್‌ಸಿಬಿ ಸಂಬಂಧಿಸಿದಂತೆ ಸಮರ್ಥವಾದ ಉತ್ತರ ಕೊಟ್ಟಿದ್ದಾರೆ. ಅವರ ಶಕ್ತಿ, ಸಾಮರ್ಥ್ಯವೂ ನನಗೆ ಗೊತ್ತು’ ಎಂದರು. 

––––––––––––––––

‘ಎಲ್ಲರದ್ದೂ ಮುಗಿಯುವವರೆಗೆ ಕೂರು’

ಪ್ರವಾಸೋದ್ಯಮ ಸಂಬಂಧಿ ಮಸೂದೆಯನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರು ಮಂಡಿಸಿದ ಬೆನ್ನಲ್ಲೇ, ಮಾತನಾಡಲು ತನಗೆ ಅವಕಾಶ ನೀಡಬೇಕು ಎಂದು ಬಿಜೆಪಿಯ ಕೆ.ಎಸ್‌.ನವೀನ್‌ ಪದೇ–ಪದೇ ಕೈಎತ್ತಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಅವಕಾಶ ನೀಡಿದ ನಂತರ ನವೀನ್‌ ಅವರು ಸುಮಾರು ನಾಲ್ಕು ನಿಮಿಷ ಮಾತನಾಡಿದರು.

ತಮ್ಮ ಮಾತು ಮುಗಿಸಿ ಕೂತ ನವೀನ್‌ , ಸದನದಿಂದ ಹೊರಗೆ ಹೋಗಲು ಕುರ್ಚಿಯಿಂದ ಮೇಲೆದ್ದರು. ಇದರಿಂದ ಸಿಟ್ಟಿಗೆದ್ದ ಸಭಾಪತಿ ಹೊರಟ್ಟಿ ಅವರು, ‘ನಿನ್ನ ಮಾತು ಮುಗಿದ ಕೂಡಲೇ ಹೊರಟುಬಿಡುವುದಲ್ಲ. ಎಲ್ಲರ ಮಾತು ಮುಗಿಯುವವರೆಗೂ ನೀನು ಕೂರಬೇಕು’ ಎಂದು ತಾಕೀತು ಮಾಡಿದರು. ಕೂರುತ್ತೇನೆ ಎಂಬಂತೆ ನವೀನ್‌ ಅವರು ತಲೆಯಾಡಿಸಿದರು. ಆಗ ಹೊರಟ್ಟಿ ಅವರು, ‘ನೀ ಕೂತದ್ದು ನೋಡಿದ್ದೇನೆ. ಇವತ್ತು ಎಷ್ಟು ಕೂರುತ್ತೀ ಎಂಬುದನ್ನೂ ನೋಡುತ್ತೇನೆ’ ಎಂದರು.

––––

‘ಸಾರಾಯಿ–ಸಿಹಿಯಿಂದಲೂ ಆದಾಯ’

ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಮಂಡಿಸಲಾದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಮಸೂದೆಯ ಮೇಲಿನ ಚರ್ಚೆಯ ವೇಳೆ ಬಿಜೆಪಿಯ ಡಿ.ಎಸ್‌. ಅರುಣ್, ‘ರಾಜ್ಯದಲ್ಲಿ ಪ್ರವಾಸೋದ್ಯಮ ಕುಂಠಿತವಾಗಿದೆ. ಆದಾಯ ಗಳಿಕೆಗೆ ಅವಕಾಶಗಳಿದ್ದರೂ ಅವನ್ನು ಕೈಚೆಲ್ಲಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಸದಸ್ಯರು ದನಿಗೂಡಿಸಿದರು. ಬಿಜೆಪಿಯ ಎಚ್‌.ವಿಶ್ವನಾಥ್‌, ‘ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ನೀಡುತ್ತಿರುವ ಒತ್ತು ಯಾವುದಕ್ಕೂ ಸಾಲದು. ಎಲ್ಲ ರೀತಿಯ ಅಭಿವೃದ್ಧಿಗೆ ಒತ್ತು ನೀಡಬೇಕು. ಮೈಸೂರಿನಂತಹ ಸಾಂಸ್ಕೃತಿಕ ನಗರಿಯಲ್ಲಿ ಹಲವು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ಹೊರಗಿನಿಂದ ಬಂದವರು ಅಲ್ಲಿನ ಟಾಂಗಾಗಳಲ್ಲಿ ಓಡಾಡಿ ಸಂಭ್ರಮಿಸಬೇಕು. ಸರ್ಕಾರ ಒಂಚೂರು ಆಸಕ್ತಿ ವಹಿಸಿದರೆ ಸಾರಾಯಿಯಿಂದ ಸಿಹಿಯವರೆಗೂ ಎಲ್ಲದರಿಂದಲೂ ಆದಾಯ ಬರುತ್ತದೆ’ ಎಂದರು. 

............

‘ಯತ್ನಾಳ್, ಹೊಸ ಪಕ್ಷ ಕಟ್ಟಿ ಮುಖ್ಯಮಂತ್ರಿ ಆಗಿ’

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವಾಗ ಮಧ್ಯೆ ಮಾತನಾಡಿದ ಬಸನಗೌಡ ಪಟೀಲ ಯತ್ನಾಳ್ ಅವರಿಗೆ ‘ನೀನು ಸುಮ್ಮನೆ ಕುಳಿತುಕೊ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದೀಯ’ ಎಂದರು. ಅದಕ್ಕೆ ಯತ್ನಾಳ್, ‘ನಿಮ್ಮನ್ನೂ ದೇವೇಗೌಡರು ಜನತಾ ದಳದಿಂದ ಉಚ್ಛಾಟನೆ ಮಾಡಿದ್ದರು. ಅದಕ್ಕೆ ನೀವು ಮುಖ್ಯಮಂತ್ರಿ ಆಗಿದ್ದು, ಉಚ್ಛಾಟನೆ ಆದವರಿಗೆಲ್ಲ ಮುಖ್ಯಮಂತ್ರಿಯಾಗುವ ಯೋಗ ಇರುತ್ತದೆ’ ಎಂದರು.

ಅದಕ್ಕೆ ಸಿದ್ದರಾಮಯ್ಯ, ‘ನೀನು ಹೊಸ ಪಕ್ಷ ಕಟ್ಟಿ ಮುಖ್ಯಮಂತ್ರಿ ಆಗು’ ಎಂದರು. ‘ನಿಮ್ಮ ಪಕ್ಷ ಯಾವುದು ಹೇಳಿ’ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌, ಯತ್ನಾಳ್ ಕಾಲೆಳೆದರು. ‘ನಮ್ಮದು ನಾನ್‌ ಅಡ್ಜಸ್ಟಬಲ್‌ ಪೊಲಿಟಕಲ್‌ ಪಾರ್ಟಿ’ ಎಂದು ಪ್ರತಿಕ್ರಿಯಿಸಿದ ಯತ್ನಾಳ್, ‘ಕಾಂಗ್ರೆಸ್‌ಗೆ ಲಾಭ ಆಗಬಾರದು ಎಂದು ಹೊಸ ಪಕ್ಷ ಕಟ್ಟುತ್ತಿಲ್ಲ. ನೀವು ಹೇಗೂ ಮುಖ್ಯಮಂತ್ರಿ ಆಗುವುದಿಲ್ಲ. ನಿಮ್ಮ ಅಹಿಂದ ಮತಗಳು ನಮಗೆ’ ಎಂದರು. 

‘ನಾನು ಮತ್ತೆ ಮುಖ್ಯಮಂತ್ರಿ ಆಗಲ್ಲ. ಆದರೆ, ನೀವು ಪರಿಶಿಷ್ಟರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿರೋಧಿಗಳು. ನಿಮಗೆ ಯಾವ ಕಾರಣಕ್ಕೂ ನಮ್ಮ ಮತ ಸಿಗಲ್ಲ. ನೀವು ವಿಜಯಪುರದಲ್ಲಿ ಸೋಲ್ತೀರಿ. 2028ರ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.