ADVERTISEMENT

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: 362 ಅಭ್ಯರ್ಥಿಗಳ ನೇಮಕಾತಿ ಸರಾಗ

17 ನಿಮಿಷಗಳಲ್ಲೇ ನಾಲ್ಕು ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 18:40 IST
Last Updated 21 ಫೆಬ್ರುವರಿ 2022, 18:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕೆ ಪೂರಕವಾಗಿ ರೂಪಿಸಿರುವ ‘ಕರ್ನಾಟಕ ಸಿವಿಲ್‌ ಸೇವೆಗಳ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ ಮಸೂದೆ– 2022’ಕ್ಕೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಲಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸುತ್ತಿದ್ದಾಗ 17 ನಿಮಿಷಗಳಲ್ಲೇ ಹೆಚ್ಚಿನ ಚರ್ಚೆ ಇಲ್ಲದೆ ಒಟ್ಟು ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡಲಾಯಿತು.

ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘362 ಅಭ್ಯರ್ಥಿಗಳ ನೇಮಕವನ್ನು ನ್ಯಾಯಾಲಯ ರದ್ದುಪಡಿಸಿತ್ತು. ನೇಮಕ ಸಂಬಂಧ ಕೆ‍ಪಿಎಸ್‌ಸಿ ಸದಸ್ಯರು ಲಂಚ ಕೇಳಿದ್ದಾರೆ ಎಂದು ಸಿಐಡಿ ವರದಿಯಲ್ಲಿತ್ತು. ಆದರೆ, ಸದಸ್ಯರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಅಭ್ಯರ್ಥಿಗಳು ಅಕ್ರಮ ಎಸಗಿಲ್ಲ ಎಂದೂ ಸಿಐಡಿ ವರದಿಯಲ್ಲಿದೆ. ಹೀಗಾಗಿ, ಅವರನ್ನು ದಂಡಿಸುವುದು ಸರಿಯಲ್ಲ. ಅವರಿಗೆ ಉದ್ಯೋಗ ಸಿಗದ ಸ್ಥಿತಿ ನಿರ್ಮಾಣವಾಗಬಾರದು. ಈ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ’ ಎಂದು ಹೇಳಿದರು.

ADVERTISEMENT

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ, ‘ನೇಮಕಾತಿ ಪತ್ರ ಸಿಗದೆ ತೊಂದರೆ ಅನುಭವಿಸಿದ ಅಭ್ಯರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದರು.

ಡಿಜಿಟಲ್‌ ಸ್ಟಾಂಪ್‌ ಪೇಪರ್‌ಗೆ ಮಾನ್ಯತೆ: ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ಹಂಚಿಕೆದಾರನಿಗೆ ಹಸ್ತಾಂತರ ಪತ್ರದ ಮೇಲಿನ ಕರಾರು ಮಾಡಿಕೊಂಡ ದಿನದಂದು ಇದ್ದ ನಿವೇಶನ ಮಾರುಕಟ್ಟೆ ಮೌಲ್ಯದ ಮೇಲೆ ಸ್ಟಾಂಪು ಶುಲ್ಕ ಪಾವತಿಸುವ ಉದ್ದೇಶಕ್ಕಾಗಿ ‘ಕರ್ನಾಟಕ ಸ್ಟಾಂಪು (ತಿದ್ದುಪಡಿ) ಮಸೂದೆ’ಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ‌

ಕಂದಾಯ ಸಚಿವ ಆರ್.ಅಶೋಕ, ‘ಇಡೀ ಪ್ರಕ್ರಿಯೆಯನ್ನು ಸರಳೀಕರಣ ಮಾಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಡಿಜಿಟಲ್‌ ಛಾಪಾ ಕಾ‌ಗದಗಳು ಈಗ ಸಿಗುತ್ತಿವೆ. ಅದಕ್ಕೆ ಕಾನೂನು ಮಾನ್ಯತೆ ಕೊಡಬೇಕಿದೆ. ಹೀಗಾಗಿ, ಮಸೂದೆ ತರಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.