ADVERTISEMENT

ಕೈಗಾರಿಕಾ ಕಟ್ಟಡಗಳ ತೆರಿಗೆ ಇಳಿಕೆ: ಮಸೂದೆ ಮಂಡಿಸಿದ ಸಚಿವ ಬೈರತಿ ಬಸವರಾಜ್‌

ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಹೆಚ್ಚಳಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:19 IST
Last Updated 15 ಡಿಸೆಂಬರ್ 2021, 22:19 IST
ಬೈರತಿ ಬಸವರಾಜ್‌
ಬೈರತಿ ಬಸವರಾಜ್‌   

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಉತ್ತೇಜಿಸಲು ಪಾಲಿಕೆಗಳು ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕಾ ಕಟ್ಟಡಗಳಿಗೆ ವಿಧಿಸಬೇಕಾದ ಸ್ವತ್ತು ತೆರಿಗೆಗೆ ಪ್ರತ್ಯೇಕ ದರ ನಿಗದಿ ಮಾಡುವ ‘ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು ಮಸೂದೆ’ಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಈ ಮಸೂದೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಮಂಡಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ದರವನ್ನು ನಿಗದಿಪಡಿಸಲು ಅನುಕೂಲವಾಗುವಂತೆ 1964ರ ಕರ್ನಾಟಕ ಪೌರಸಭೆಗಳ ಕಾಯ್ದೆಯ ಕಲಂ 94 ಮತ್ತು1976ರ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯ ಕಲಂ 108ಕ್ಕೆ ತಿದ್ದುಪಡಿ ಮಾಡಿದ್ದು, ಇದಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಬೇಕಾಗಿದೆ.

ADVERTISEMENT

ಇದರಿಂದಾಗಿ, ವಾಣಿಜ್ಯ ಕಟ್ಟಡಗಳ ಮೂಲ ದರ ಶೇ 0.5 ಕ್ಕಿಂತ ಕಡಿಮೆ ಇರುವಂತೆ, ಶೇ 3 ಕ್ಕಿಂತ ಹೆಚ್ಚಿಲ್ಲದಂತೆ, ವಾಣಿಜ್ಯೇತರ ಕಟ್ಟಡಗಳಿಗೆ ಕಟ್ಟಡದ ಮೂಲ ದರ ಶೇ 0.02 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ 1.5 ಕ್ಕಿಂತ ಹೆಚ್ಚಿಲ್ಲದಂತೆ ನಿಗದಿ ಮಾಡಲಾಗಿದೆ. ಖಾಲಿ ಭೂಮಿಗಳಿಗೆ ಮೂಲ ಬೆಲೆಯ ಶೇ 0.2 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ 0.5 ಕ್ಕಿಂತ ಹೆಚ್ಚಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ನಿಗದಿಪಡಿಸಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಕೈಗಾರಿಕಾ ಆಸ್ತಿ ತೆರಿಗೆಯನ್ನು ವಾಣಿಜ್ಯ ಕಟ್ಟಡಗಳಿಗಿಂತ ಕಡಿಮೆ ವಿಧಿಸಿದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರೆಯಾದರೂ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹವಾಗುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರಿಂದ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು ಮೂಲಸೌಕರ್ಯಗಳನ್ನು ಒದಗಿಸಲು ಈ ಕಾಯ್ದೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸರ್ಕಾರಿ ಭೂಮಾಪಕರಿಗೂ ಅವಕಾಶ: ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ, ಪೋಡಿ, ಭೂಪರಿವರ್ತನೆ ನಕ್ಷೆ, ಇ–ಸ್ವತ್ತು ಮುಂತಾದವುಗಳ ಸಂದರ್ಭದಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ಸರ್ಕಾರಿ ಭೂಮಾಪಕರಿಗೂ ನೀಡಲು ಅವಕಾಶ ಒದಗಿಸುವ ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ’ ಮಂಡಿಸಲಾಯಿತು. ಸದ್ಯದ ವ್ಯವಸ್ಥೆಯಲ್ಲಿ ಪರವಾನಗಿ ಪಡೆದ ಭೂಮಾಪಕರು ಮಾತ್ರ 11 ಇ ಅಡಿ ಸ್ಕೆಚ್‌ ನೀಡಬಹುದಾಗಿತ್ತು. ಕಾಯ್ದೆಗೆ ತಿದ್ದುಪಡಿ ಮೂಲಕ ಸರ್ಕಾರಿ ಭೂಮಾಪಕರಿಗೂ ಈ ಅವಕಾಶ ನೀಡಲಾಗುವುದು. ಈ ಮಸೂದೆಯನ್ನು ಕಂದಾಯ ಸಚಿವ ಆರ್‌.ಅಶೋಕ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು.

ಇನಾಂ ಜಮೀನು: ಅರ್ಜಿ ಸಲ್ಲಿಕೆಗೆ ಇನ್ನೂ ಒಂದು ವರ್ಷ ಅವಕಾಶ
ರಾಜ್ಯ ವಿವಿಧೆಡೆ ಇನಾಂ ಜಮೀನು ಸಾಗುವಳಿ ಮಾಡುತ್ತಿರುವ ರೈತರು ಪಹಣಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಇನ್ನೂ ಒಂದು ವರ್ಷ ಮುಂದುವರಿಸುವುದಕ್ಕೆ ಅವಕಾಶ ನೀಡುವ ‘ಕರ್ನಾಟಕ ಇನಾಮು ರದ್ದತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ’ಯನ್ನು ಮಂಡಿಸಲಾಯಿತು.

ಭೂಮಿಯ ಹಕ್ಕನ್ನು ರೈತರಿಗೆ ನೀಡುವುದರಿಂದ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಸರ್ಕಾರಿ ಉದ್ದೇಶಕ್ಕೆ ಭೂಸ್ವಾದೀನ ಮಾಡಿಕೊಂಡಾಗ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮಸೂದೆ ಮಂಡಿಸಲಾಗಿದೆ.

ರಾಜ್ಯದ ಲಕ್ಷಾಂತರ ಎಕರೆ ಇನಾಂ ಭೂಮಿಯನ್ನುಕಳೆದ 50– 60 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 30 ಸಾವಿರ ಎಕರೆ ಇನಾಂ ಭೂಮಿಯಿದೆ. ರಾಜ್ಯದಲ್ಲಿ ಒಟ್ಟು 1 ಲಕ್ಷ ಎಕರೆಗೂ ಹೆಚ್ಚು ಇನಾಂ ಭೂಮಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.