ADVERTISEMENT

ಕರ್ನಾಟಕ ಬಂದ್‌ಗೆ ಹೇಗಿತ್ತು ಸ್ಪಂದನೆ? ಇಲ್ಲಿದೆ ಮಾಹಿತಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಕಾಂಗ್ರೆಸ್, ಜೆಡಿಎಸ್, ಸಿಪಿಐ (ಎಂ) ಪಕ್ಷಗಳು ಸೇರಿದಂತೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳು ರೈತರ ಹೋರಾಟಕ್ಕೆ ಕೈ ಜೋಡಿಸಿದ್ದು ಬಂದ್‌ ಆರಂಭವಾಗಿದೆ. ಬಂದ್‌ ವೇಳೆಯ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:14 IST
Last Updated 28 ಸೆಪ್ಟೆಂಬರ್ 2020, 14:14 IST

ಸರ್ಕಾರಗಳ ವಿರುದ್ಧ ಧಾರವಾಡದಲ್ಲಿ ಹೊರಹೊಮ್ಮಿದ ಆಕ್ರೋಶ

ಕರ್ನಾಟಕ ಬಂದ್‌ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿಯೇತರ ರಾಜಕೀಯ ಪಕ್ಷಗಳು ಸೇರಿದಂತೆ, ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದ ಬಂದ್‌, ಮಧ್ಯಾಹ್ನದವರೆಗೆ ಮಾತ್ರ ಸೀಮಿತವಾಗಿತ್ತು. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

Prajavani

ಉತ್ತರ ಕನ್ನಡದಲ್ಲಿ ‘ಕರ್ನಾಟಕ ಬಂದ್‌’ಗೆ ನೀರಸ ಪ್ರತಿಕ್ರಿಯೆ

ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರಗಳ ತಿದ್ದುಪಡಿ ಮಸೂದೆಯನ್ನು ವಿರೋಧಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಸಿ.ಐ.ಟಿ.ಯು, ಕರ್ನಾಟಕ ಪ್ರದೇಶ ರೈತ ಸಂಘ, ಎಸ್.ಎಫ್.ಐ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಆಟೊ ರಿಕ್ಷಾ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ನೇತೃತ‌್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಜಿಲ್ಲಾ ರಂಗಮಂದಿರದಿಂದ ಹೊರಟು, ಲಂಡನ್ ಬ್ರಿಜ್ ಬಳಿಗೆ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ADVERTISEMENT

ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಬೆಂಬಲ

ವಿವಿಧ ಕಾಯ್ದೆಗಳ ತಿದ್ದುಪಡಿ ಸುಗ್ರಿವಾಜ್ಞೆಗಳ ವಿರೋಧಿಸಿ ವಿವಿಧ ಸಂಘಟನೆಗಳು ಮತ್ತು ಕೆಲ ಪಕ್ಷಗಳು ಸೇರಿ ಸೋಮವಾರ ನಡೆಸಿದ ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಬಹುಪಾಲು ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದರು. ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು ಮತ್ತು ಜನ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್‌ಗಳು, ಸಾರಿಗೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಉಡುಪಿಯಲ್ಲಿ ಬಂದ್‌ ನೀರಸ: ವ್ಯಾಪಾರ ವಹಿವಾಟು ಅಬಾಧಿತ

ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ರಾಜ್ಯ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರ್ವಜನಿಕ ಸಾರಿಗೆ, ವ್ಯಾಪಾರ ವಹಿವಾಟು ಎಂದಿನಂತಿತ್ತು. ಜನಜೀವನಕ್ಕೆ ಹೆಚ್ಚು ತೊಂದರೆಯಾಗಲಿಲ್ಲ.

ಕೋಲಾರದಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ ಖಂಡಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ‘ಕರ್ನಾಟಕ ಬಂದ್‌’ಗೆ ಕರೆ ಕೊಟ್ಟಿದ್ದರಿಂದ ಕೋಲಾರದಲ್ಲಿ ಸೋಮವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ರಾಯಚೂರಿನಲ್ಲಿ ಬಂದ್‌ ಭಾಗಶಃ ಯಶಸ್ವಿ

<p id="page-title">ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿರುವ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ಕೈಬಿಡುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ರೈತ ಸಂಘಟನೆಗಳು ಸೋಮವಾರ ನಡೆಸಿದ ಬಂದ್‌ ಭಾಗಶಃ ಯಶಸ್ವಿಯಾಯಿತು.</p>

ಕೊಳ್ಳೇಗಾಲ ಸಂಪೂರ್ಣ ಸ್ತಬ್ಧ, ಶಾಸಕರು ಪ್ರತಿಭಟನೆಯಲ್ಲಿ ಭಾಗಿ

ಮಸೂದೆ ವಿರುದ್ಧ ಕೋಟೆನಾಡು ಭಾಗಶಃ ಬಂದ್

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿದ ಮಸೂದೆಗಳನ್ನು ವಿರೋಧಿಸಿ ರೈತರು ಮತ್ತು ಕಾರ್ಮಿಕರು ಸೋಮವಾರ ಕರೆ ನೀಡಿದ್ದ ಬಂದ್‌ ಕೋಟೆನಾಡು ಚಿತ್ರದುರ್ಗದಲ್ಲಿ ಭಾಗಶಃ ಯಶಸ್ವಿಯಾಯಿತು. ತಾಲ್ಲೂಕು ಕೇಂದ್ರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರದ ವಿರುದ್ಧ ಹಾವೇರಿಯಲ್ಲಿ ರೈತರ ರಣಕಹಳೆ

ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಹಾವೇರಿ ಬಂದ್‌’ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು ರಣಕಹಳೆ ಮೊಳಗಿಸಿದರು.  

ರಾಮನಗರದಲ್ಲಿ ಒಗ್ಗಟ್ಟಿನ ಪ್ರತಿಭಟನೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ವಿವಿಧ ಕಾಯ್ದೆ ಹಾಗೂ ಮಸೂದೆಗಳ ವಾಪಸ್‌ಗೆ ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ ಅಂಗವಾಗಿ ರಾಮನಗರದಲ್ಲಿ ಹಲವು ಸಂಘಟನೆಗಳಿಂದ ಒಗ್ಗಟ್ಟಿನ ಪ್ರತಿಭಟನೆಗಳು ನಡೆದವು. ಆದರೆ ಜನಜೀವನಕ್ಕೆ ಹೆಚ್ಚಿನ ತೊಂದರೆ ಆಗಲಿಲ್ಲ.

ಕರ್ನಾಟಕ ಬಂದ್‌ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆ ಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ಬಂದ್‌ ಬೆಂಬಲಿಸಿ ಪ್ರತಿಭಟನೆ

ಕೃಷಿ, ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಮಸೂದೆ ವಿರೋಧಿಸಿ ಬೀದರ್‌ನಲ್ಲಿ ಸೋಮವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹೆದ್ದಾರಿ ತಡೆದು ವಿಜಯಪುರದಲ್ಲಿ ರೈತ, ಕಾರ್ಮಿಕರಿಂದ ಪ್ರತಿಭಟನೆ

ಭೂಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಸೋಮವಾರ ಕರೆ ನೀಡಲಾಗಿದ್ದ ಬಂದ್‌ಗೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಪ್ರತಿಭಟನೆ, ಹೆದ್ದಾರಿ ತಡೆ, ಮನವಿ ಸಲ್ಲಿಕೆಗೆ ಸೀಮಿತವಾಯಿತು.

ಮಂಡ್ಯ ಜಿಲ್ಲೆಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ರಾಜ್ಯ ಬಂದ್‌ಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಬೆಳಿಗ್ಗೆಯಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿವಿಧೆಡೆ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಾಗಿಲು ಮುಚ್ಚಿದರು. ನಗರದ ಪೇಟೆ ಬೀದಿ, ಆರ್‌ ಪಿ ರಸ್ತೆ, ವಿವಿ ರಸ್ತೆಯಲ್ಲಿ ಅಂಗಡಿಗಳು, ಹೋಟೆಲ್‍ಗಳು, ಅರ್ಧ ಬಾಗಿಲು ತೆರೆದಿದ್ದವು. ಸಂಘಟನೆಗಳ ಮುಖಂಡರು ಬೈಕ್ ರ‍್ಯಾಲಿ ಮೂಲಕ ತೆರಳಿ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಬೆಳಗಾವಿಯಲ್ಲಿ ಸರ್ಕಾರಗಳ ವಿರುದ್ಧ ಬೃಹತ್‌ ಪ್ರತಿಭಟನೆ

‌ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು

ಬಳ್ಳಾರಿಯಲ್ಲಿ ಒಮ್ಮತದ ಬಂದ್‌ ಯಶಸ್ವಿ 

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲೆಯಾದ್ಯಂತ ‘ಕರ್ನಾಟಕ ಬಂದ್‌’ ಯಶಸ್ವಿಯಾಯಿತು. ಹಳ್ಳಿಗಳಿಂದ ರೈತರು ಎತ್ತಿನಗಾಡಿಗಳಿಂದ ಬಂದರು, ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರೂ ಬೆಂಬಲಿಸಿ ಹೋರಾಟದ ಗೀತೆಗಳನ್ನು ಹಾಡಿದರು. ಕೇಂದ್ರ, ರಾಜ್ಯ ಸರ್ಕಾರದ ಪ್ರತಿಕೃತಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳ ನೂರಾರು ಮಂದಿ ಬೈಕ್‌ ರ್ಯಾಲಿ ನಡೆಸಿದರು, ಮಾಸ್ಕ್‌ ಧರಿಸದೇ ಬಂದವರಿಗೆ ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡರು ಮಾಸ್ಕ್‌ ವಿತರಿಸಿದರು.

ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ನಷ್ಟ: ಸಿದ್ದರಾಮಯ್ಯ

ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರಿಗಷ್ಟೇ ಅಲ್ಲ ಗ್ರಾಹಕರಿಗೂ ಭವಿಷ್ಯದಲ್ಲಿ ದೊಡ್ಡ ನಷ್ಟ ಕಾದಿದೆ. ಖಾಸಗಿ ಕಂಪನಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಬೆಲೆಗೆ ಮಾರಿ ಜನರ ಸುಲಿಗೆಗೆ ಇಳಿಯಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ವಿಜಯಪುರದಲ್ಲಿ ಪ್ರತಿಭಟನೆ

ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕಾಂಗ್ರೆಸ್‌ನಿಂದ ಪ್ರತಿಭಟನೆ

ವಿಜಯಪುರದಲ್ಲಿ ರೈತ, ಕಾರ್ಮಿಕರ ಆಕ್ರೋಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿಜಯಪುರದಲ್ಲಿ ರೈತ, ಕಾರ್ಮಿಕ ಸಂಘಟನೆಗಳಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಕರ್ನಾಟಕ ಬಂದ್ ಅಂಗವಾಗಿ ನಗರದ ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಕಾರ್ಮಿಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಮುಚ್ಚುವ ಸಮಸ್ಯೆಯೇ ಇಲ್ಲ. ನಷ್ಟದಲ್ಲಿರುವ ಎಪಿಎಂಸಿಗಳನ್ನೂ ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಬೀದರ್‌: ಕೃಷಿ ಮಸೂದೆ, ಎಪಿಎಂಸಿ ಹಾಗೂ ಭೂಸುಧಾರಣೆ ತಿದ್ದುಪಡಿ ಮಸೂದೆ ವಿರೋಧಿಸಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಹುಬ್ಬಳ್ಳಿ: ಕರ್ನಾಟಕ ಬಂದ್ ಬೆಂಬಲಿಸಿ, ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿರುವವರಿಗೆ ಜೆಡಿಎಸ್ ವತಿಯಿಂದ ಮಧ್ಯಾಹ್ನ ಉಪಾಹಾರ ವ್ಯವಸ್ಥೆ ಮಾಡಲಾಯಿತು.

ಕಾರವಾರ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಬಂದ್ ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿವಮೊಗ್ಗ: ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ, ದಲಿತ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಿರಸಿಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಮಾರಿಕಾಂಬಾ ದೇವಾಲಯದ ಎದುರು ಮೆರವಣಿಗೆ ಆರಂಭಿಸಲಾಯಿತು. ಬಳಿಕ ಐದು ರಸ್ತೆ ಸರ್ಕಲ್, ಸಿ.ಪಿ ಬಜಾರ್ ಮಾರ್ಗವಾಗಿ ನಟರಾಜ ರಸ್ತೆಯ ಮೂಲಕ ಹಳೆ ಬಸ್ ನಿಲ್ದಾಣದ ವೃತ್ತದವರೆಗೆ ತಲುಪಿದರು.

ಬಾಗಲಕೋಟೆ: ನಗರದಲ್ಲಿ ಪ್ರತಿಭಟನೆ ವೇಳೆ ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತರಾದ ಕಲಾವಿದ ಆರ್.ಡಿ.ಬಾಬು ರೈತನ ಸಂಕಷ್ಟದ ಅಣುಕು ಪ್ರದಶ೯ನ ನೀಡಿ ಗಮನ ಸೆಳೆದರು.

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ವಿಜಯಪುರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಸನ: ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕ ಎ .ಟಿ.ರಾಮಸ್ವಾಮಿ ಏಕಾಂಗಿ ಪ್ರತಿಭಟನೆ ನಡೆಸಿದರು

ಹುಬ್ಬಳ್ಳಿ: ಕರ್ನಾಟಕ ಬಂದ್ ಗೆ ಬೆಂಬಕ ವ್ಯಕ್ತಪಡಿಸಿದ ಬಿಜೆಪಿಯೇತರ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ ಕೊಟ್ಟಿರುವ ಬಂದ್ ಗೆ ಸೋಮವಾರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಡುಪಿ: ರೈತ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿರುವ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ

ತುಮಕೂರು: ಕರ್ನಾಟಕ ಬಂದ್ ಪ್ರಯುಕ್ತ ನಗರದ ಟೌನ್ ಹಾಲ್ ನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದಾರೆ. ಈಗ ಬೈಕ್ ರ್ಯಾಲಿಗೆ ಮುಂದಾಗಿದ್ದಾರೆ.

ರಾಮನಗರದ ಐಜೂರು ವೃತ್ತದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜನರು ‌ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು

ಯಾದಗಿರಿ: ಎಪಿಎಂಸಿ ತಿದ್ದುಪಡಿ ಕಾಯಿದೆ, ಭೂಸುಧಾರಣಾ ತಿದ್ದುಪಡಿ ಕಾಯಿದೆ ಹಾಗೂ ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ರೈತರು, ಕರವೇ ಕಾರ್ಯಕರ್ತರು ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಬಂದ್ ಇಲ್ಲ: ಧರಣಿ, ಪ್ರತಿಭಟನೆ

ಮಂಗಳೂರಿನಲ್ಲಿ ಎಂದಿನಂತೆ ವಾಹನ ಸಂಚಾರ ಮತ್ತು ಮಾರುಕಟ್ಟೆ ತೆರೆದಿದೆ.

ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರೈತಸಂಘಟನೆಗಳು ಆರಂಭಿಸಿರುವ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳಯ ಕೈ ಜೋಡಿಸಿವೆ

ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಶಾಲನಗರದ ಕೊಪ್ಪ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಕಾರ್ಮಿಕರನ್ನು ಬಂಧಿಸಲಾಗಿದೆ.

ರಾಮನಗರ: ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ ಎಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಾಮರಾಜನಗರ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಖಂಡಿಸಿ ಕರೆ ನೀಡಿರುವ ಅಂಗವಾಗಿ ಚಾಮರಾಜನಗರದಲ್ಲಿ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂದ್ ನಿಂದಾಗಿ ಬಹುತೇಕ ಅಂಗಡಿ‌ಮುಂಗಟ್ಟು ಮುಚ್ಚಿವೆ

ಹುಬ್ಬಳ್ಳಿ: ಕರ್ನಾಟಕ ಬಂದ್ ಅಂಗವಾಗಿ, ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ಬೆಳಿಗ್ಗೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದರು.

ಬೆಳಗಾವಿಯಲ್ಲಿ ರೈತ ವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದ್ದರೂ ಎನ್ ಡಬ್ಲ್ಯು ಕೆ ಎಸ್ ಆರ್ ಟಿ ಸಿ ಬಸ್ ಗಳ ಕಾರ್ಯಾಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದವರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟಿಸಿದರು.

ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಅಂಗಡಿಗಳು ಬಾಗಿಲು ಮುಚ್ಚಿವೆ. ಬಸ್ ಸಂಚಾರ ಸ್ಥಗತಗೊಂಡಿದೆ.

ತುಮಕೂರು ನಗರದಲ್ಲೂ ಪ್ರತಿಭಟನೆ ನಡೆದಿದೆ. ಬಸ್ ಸಂಚಾರ ವಿರಳವಾಗಿತ್ತು. ಆಟೊ ಸಂಚಾರ ಕಡಿಮೆ ಇದೆ.

ಚಿಕ್ಕಮಗಳೂರು: ಕೃಷಿ ಮಸೂದೆ ವಿರೋಧಿಸಿ ನಗರದ ಕೆಎಸ್ ಆರ್ ಟಿಸಿ ನಿಲ್ದಾಣದ ಮುಂದೆ ಪ್ರತಿಭಟನೆ

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಸಂಬಂಧಿಗಳ ಕಾಯ್ದೆ ಜಾರಿ ವಿರೋಧಿಸಿ ವಿವಿಧ ರೈತ ಹಾಗೂ ಕನ್ನಡಪರ ‌ಸಂಘಟನೆಗಳು ನಗರದಲ್ಲಿ ಬೆಳಿಗ್ಗೆಯಿಂದ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ‌ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ

ಕರ್ನಾಟಕ ಬಂದ್‌ ಪರಿಣಾಮ ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆ ಭಣಗುಡುತ್ತಿದೆ

ಬಳ್ಳಾರಿಯ ಗಡಿಗಿ‌‌ ಚೆನ್ನಪ್ಪ ವೃತ್ತದಲ್ಲಿ ಟೈರ್ ಸುಟ್ಟು ಪ್ರತಿಭಟಿಸಿದ ರೈತರು

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಕಾಯ್ದೆಗಳ ತಿದ್ದುಪಡಿ ಮಾಡಲು ಹೊರಟಿರುವುದು ವಿರೋಧಿಸಿ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.