ADVERTISEMENT

ನಮ್ಮ ಕೆಲಸಕ್ಕೆ ಬೆಲೆ ಕಟ್ಟುತ್ತೀರಾ..?: ಆಶಾ ಕಾರ್ಯಕರ್ತೆಯರ ಮನದಾಳ

ಅಹೋರಾತ್ರಿ ಧರಣಿಯಲ್ಲಿದ್ದ ಆಶಾ ಕಾರ್ಯಕರ್ತೆಯರ ಮನದಾಳ

ಜಯಸಿಂಹ ಆರ್.
Published 10 ಜನವರಿ 2025, 12:28 IST
Last Updated 10 ಜನವರಿ 2025, 12:28 IST
<div class="paragraphs"><p>ಡಾಂಬರು ರಸ್ತೆಯ ಮೇಲೆ ಕುಳಿತು ಊಟ ಮಾಡಿದ ಆಶಾ ಕಾರ್ಯಕರ್ತೆಯರು</p></div>

ಡಾಂಬರು ರಸ್ತೆಯ ಮೇಲೆ ಕುಳಿತು ಊಟ ಮಾಡಿದ ಆಶಾ ಕಾರ್ಯಕರ್ತೆಯರು

   

ಬೆಂಗಳೂರು: ಅದಾಗಲೇ ರಾತ್ರಿ 11 ಕಳೆದಿತ್ತು. ಮೈಹೊಕ್ಕು ಮೂಳೆಯನ್ನೂ ಕೊರೆಯುವಂತಹ ಚಳಿ. ಥಂಡಿಗೆ ರಚ್ಚೆ ಹಿಡಿದ ಮಗು ಸುತ್ತೆಲ್ಲವೂ ಕೇಳುವಂತೆ ಅಳುತ್ತಿತ್ತು. ಅದನ್ನು ಸಮಾಧಾನಪಡಿಸುತ್ತಿದ್ದ ತಾಯಿ ‘ಆಶಾ’, ಚಳಿ ತಪ್ಪಿಸಲು ಬ್ಯಾಗುಗಳನ್ನೇ ಗೋಡೆಗಳಂತೆ ಇರಿಸಿ ಮಗುವನ್ನು ಮಲಗಿಸಿದರು. ಪಕ್ಕದಲ್ಲೇ ಇದ್ದ ‘ಆಶಾ’ಗಳು ತಮ್ಮ ಬ್ಯಾಗುಗಳನ್ನು ಮಗುವಿನ ರಕ್ಷಣೆಗೆ ನೀಡಿದರು.

ಅಷ್ಟರಲ್ಲೇ ‘ಆಶಾ’ರೊಬ್ಬರ ಫೋನು ಸದ್ದು ಮಾಡಿತು. ಇತ್ತಲ್ಲಿಂದ ಆ ತಾಯಿ ‘ಹೇಳು ಮಗನೆ’ ಎಂದರೆ, ‘ಯಾವಾಗ ಬರುತ್ತೀ’ ಎಂದು ಅತ್ತಲ್ಲಿಂದ ಮಗು ಜೋರಾಗಿ ಅಳಲಾರಂಭಿಸಿತು. ‘ಇನ್ನ ಸ್ವಲ್ಪ ಹೊತ್ತಿನಲ್ಲಿ ಬರುತ್ತೀನಿ. ಅಪ್ಪನ ಜತೆ ಮಲಗಿಬಿಡು’ ಎಂದ ತಾಯಿಯ ಕಣ್ಣಾಲಿಗಳೂ ತುಂಬಿದ್ದವು. ಕರೆ ಅಲ್ಲಿಗೆ ನಿಂತಿತು.

ADVERTISEMENT

ಅಲ್ಲೇ ಪಕ್ಕದಲ್ಲೇ ಮತ್ತೊಂದು ಗುಂಪಿನಲ್ಲಿ ಗುಸುಗುಸು. ‘ಇಷ್ಟು ಹೊತ್ತಿನಲ್ಲಿ ಎಲ್ಲಿ ಹುಡುಕುವುದು?’, ‘ಇಲ್ಲಿ ಯಾವ ಮೆಡಿಕಲ್‌ ಶಾಪ್‌ ತೆಗೆದಿರುತ್ತದೆ?’, ‘ಹೆಲ್ತ್‌ ಸೆಂಟರ್‌ ಅವರ ಬಳಿ ಇರುತ್ತಾ?’... ಇವೇ ಮೊದಲಾದ ಪ್ರಶ್ನೆಗಳು ಗದ್ದಲ ಎಬ್ಬಿಸಿದವು. ಅಷ್ಟರಲ್ಲೇ ಒಂದು ದನಿ, ‘ನಮ್ಮ ಅಕ್ಕನ ಮಗ ಇಲ್ಲೇ ಮಾಗಡಿ ರೋಡ್‌ನಲ್ಲಿ, ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಾನೆ. ಅವನಿಗೆ ಹೇಳಿದರೆ ತಂದು ಕೊಡುತ್ತಾನೆ’ ಎಂದಿತು. ಮತ್ತೆ ಯಾರಿಗೋ ಕರೆ ಮಾಡಿ, ‘ಒಂದೆರಡು ಪ್ಯಾಕು ಪ್ಯಾಡು ತಂದು ಕೊಡುತ್ತೀಯಾ’ ಎಂದಿತು. 

ಮಾಸಿಕ ₹15,000 ಗೌರವಧನ ಮತ್ತು ಇತರ ಸವಲತ್ತುಗಳಿಗಾಗಿ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದ ಹೊರಾವರಣದಲ್ಲಿ ‘ಆಶಾ’ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿಯ ಬಿಡಿ ದೃಶ್ಯಗಳಿವು.

ಪ್ರತಿಭಟನಾ ಸ್ಥಳದಲ್ಲೇ ಮಗುವನ್ನು ಮಲಗಿಸಿದ ‘ಆಶಾ’ ತಾಯಂದಿರು

ದೂರದ ಬೀದರ್‌ನಿಂದ ಬಂದ ಭಾಗ್ಯಮ್ಮ, ಹಾಸನದ ಬೇಲೂರಿನ ಸುಮಂಗಲಾ, ಗಡಿಜಿಲ್ಲೆ ರಾಯಚೂರಿನ ಸುಜಾತ, ಬೆಂಗಳೂರಿಗೆ ಅಂಟಿಕೊಂಡೇ ಇರುವ ರಾಮನಗರದ ಭವ್ಯ... ಎಲ್ಲರ ಹೆಸರಷ್ಟೇ ಬದಲು. ಆದರೆ ಅವರೆಲ್ಲರ ಕತೆ ಮತ್ತು ಆಗ್ರಹ ಮಾತ್ರ ಒಂದೇ. ‘ನಾವು ಮಾಡುವ ಕೆಲಸಕ್ಕೆ ಒಂದು ಗೌರವಯುತವಾದ ಮೊತ್ತ ನೀಡಿ’.

ಆಗಲೇ ಟರ್ಪಾಲ್‌ ಹೊದ್ದು ಮಲಗಲು ಅಣಿಯಾಗುತ್ತಿದ್ದ ಚಿಕ್ಕಮಗಳೂರಿನ ‘ಆಶಾ’ರೊಬ್ಬರನ್ನು ಮಾತಿಗೆ ಎಳೆದಾಗ, ‘ಆಶಾಗಳು ಮಾಡುವುದು ಮೂರೇ ಕೆಲಸ. ಅವರಿಗ್ಯಾಕೆ ಅಷ್ಟು ಹಣ ಕೊಡಬೇಕು ಎಂದು ಸಚಿವರು ಕೇಳಿದರಂತೆ. ಸ್ವಾಮಿ 40 ಕೆಲಸಗಳನ್ನು ಮಾಡುತ್ತೇವೆ. ಈ ಕಾಲದಲ್ಲಿ ಮಕ್ಕಳೇ ತಮ್ಮ ತಂದೆ–ತಾಯಿಯ ಕಫದ ಸ್ಯಾಂಪಲ್‌ ಡಬ್ಬಿ ಮುಟ್ಟುವುದಿಲ್ಲ. ಅಂಥದ್ದರಲ್ಲಿ ನಾವು ಟಿ.ಬಿ. ರೋಗಿಗಳ ಕಫದ ಸ್ಯಾಂಪಲ್‌ ತೆಗೆದುಕೊಂಡು ಬರುತ್ತೇವೆ. ಇದಕ್ಕೆಲ್ಲಾ ಬೆಲೆ ಕಟ್ಟುತ್ತೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತು ಕೇಳಿ ಎದ್ದುಬಂದ ‘ಆಶಾ’ರೊಬ್ಬರು, ‘ನಾನು ಸಿಸೇರಿಯನ್‌ ಸೇರಿ ನಮ್ಮೂರಿನಲ್ಲಿ ಈವರೆಗೆ 43 ಹೆರಿಗೆ ಮಾಡಿಸಿದ್ದೇನೆ. ಯಾವುದೂ ತೊಂದರೆಯಾಗಲಿಲ್ಲ. ಆದರೆ ನನ್ನ ಹೆರಿಗೆ ವೇಳೆ ಸಿಸೇರಿಯನ್‌ ಮಾಡಿ ಎಂದು ಬೇಡಿಕೊಂಡರೂ ವೈದ್ಯರು ಮಾಡಲಿಲ್ಲ. ಮಗು ಹೊಟ್ಟೆಯಲ್ಲೇ ಸತ್ತುಹೋಯಿತು. ಊರವರ ಆರೋಗ್ಯ ಕಾಳಜಿ ಮಾಡುವ ನಮಗೆ, ನಮ್ಮ ಆರೋಗ್ಯ ನೋಡಿಕೊಳ್ಳಲಾಗಲಿಲ್ಲ. ಅನಿವಾರ್ಯ ಕಾರಣಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಇಲ್ಲಿಗೆ ಬಂದು ನಾಲ್ಕು ದಿನ ಕಳೆದರೂ ಪರಿಹಾರ ಸಿಕ್ಕಿಲ್ಲ. ಸರ್ಕಾರ ಅಷ್ಟು ಕ್ರೂರಿಯಾಯಿತೇ’ ಎಂದು ಪ್ರಶ್ನಿಸಿದರು.

ಮಾತು ಮುಗಿಸಿ ಹೊರಡುವಾಗ ಕಾಳಿದಾಸ ಮಾರ್ಗದ ಡಾಂಬರಿನ ಮೇಲೆ ಕುಳಿತಿದ್ದ ನಾಲ್ಕೈದು ‘ಆಶಾ’ಗಳು ಪೇಪರು ಪ್ಲೇಟುಗಳಲ್ಲಿ ಇದ್ದ ಅನ್ನವನ್ನು ಹೊಟ್ಟೆಗೆ ಸೇರಿಸುತ್ತಿದ್ದರು. ಚಳಿಗೆ ಅನ್ನವೂ ಕೊರೆಯುವಂತಾಗಿತ್ತು. ಅಲ್ಲೇ ಕಾವಲಿಗಿದ್ದ ಪೊಲೀಸರು ಅತ್ತ ಹಾದುಹೋಗುವಾಗ, ‘ಸರ್‌ ನಿಮ್ಮದು ಊಟವಾಯಿತೇ’ ಎಂದು ಕೇಳಿದರು. ‘ನೀವು ಮಾಡಿಯಮ್ಮ. ಈ ಚಳಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಿ’ ಎಂದು ಪೊಲೀಸರು ಕಾಳಜಿ ತೋರಿದರು. ನಡುರಾತ್ರಿ ಒಂದು ದಾಟಿತ್ತು. ಮಂಜು ಮುಸುಗುತ್ತಿತ್ತು. ‘ಆಶಾ’ಗಳ ಮಾತು ಕಿವಿಗೆ ಬೀಳುತ್ತಲೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.