ADVERTISEMENT

ಬಿಜೆಪಿ: ಹೆಚ್ಚಾದ ಸಚಿವ ಆಕಾಂಕ್ಷಿ ಶಾಸಕರು, ತಣಿಯದ ಸಿಟ್ಟು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 19:44 IST
Last Updated 4 ಫೆಬ್ರುವರಿ 2020, 19:44 IST
   

ಬೆಂಗಳೂರು: ಸಂಪುಟ ವಿಸ್ತರಣೆಗೆ ಇನ್ನು ಒಂದು ದಿನ ಬಾಕಿ ಉಳಿದಿರುವಾಗಲೇ ಸಚಿವ ಸ್ಥಾನ ಪಡೆಯಲು ಬಿಜೆಪಿಯ ಶಾಸಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮಂಗಳವಾರವೂ ಕೆಲವು ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ಅವರ ಸೇರ್ಪಡೆ ವಿರೋಧಿಸುತ್ತಿರುವ ಶಾಸಕರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಬುಧವಾರ ಮತ್ತೆ ಈ ಶಾಸಕರು ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ರೀತಿ ಪ್ರತ್ಯೇಕ ಸಭೆಗಳನ್ನು ನಡೆಸದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಶಾಸಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ADVERTISEMENT

ಯೋಗೇಶ್ವರ ಅವರಿಗೆ ಸಂತೋಷ್‌ ಅವರ ಬೆಂಬಲ ಇರುವುದರಿಂದ ಅವರನ್ನು ಕೈಬಿಡುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ಧ್ವನಿ ಎತ್ತಿದ ಅಂಗಾರ: ದಕ್ಷಿಣ ಕನ್ನಡದ ಹಿರಿಯ ಶಾಸಕ ಎಸ್.ಅಂಗಾರ ಅವರು ‘ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಮತ್ತು ನಾನು ಸಚಿವ ಆಗಬೇಕು ಎಂದು ಕ್ಷೇತ್ರದ ಜನ ಬಯಸಿದ್ದಾರೆ’ ಎಂದು ಬಹಿರಂಗ ಹೇಳಿಕೆ ನೀಡಿದ್ದರೆ, ಸವದತ್ತಿ ಶಾಸಕ ಆನಂದ ಮಾಮನಿ ಅವರು ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೇ ಇರುವುದನ್ನು ವಿರೋಧಿಸಿ ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಮಂಗಳವಾರ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

‘ಹೊಸತಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ. ಪಕ್ಷದ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ- ಅಭಿಮಾನಕ್ಕೂ, ಪಕ್ಷದಲ್ಲಿಬೆಲೆ ಇಲ್ಲದಾಯಿತೇ’ ಎಂದು ಪ್ರಶ್ನಿಸಿದ್ದಾರೆ.

‘ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇದೇನು ವಿಪರ್ಯಾಸವೇ, ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ, ಕಾಲಾಯ ತಸ್ಮೈ ನಮಃ’ ಎಂದು ಮಾಮನಿ ಹೇಳಿದ್ದಾರೆ.

‘ಈಗಾಗಲೇ ಸಾಕಷ್ಟು ಬಾರಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ತ್ಯಜಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಪಕ್ಷದ ಮುಖಂಡರು ನನ್ನ ಕ್ಷೇತ್ರ ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಇನ್ನೊಂದೆಡೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ ಎಂಬುದು ಯಕ್ಷಪ್ರಶ್ನೆ’ ಎಂದಿದ್ದಾರೆ.

ಶಂಕರ್‌ ದುಂಬಾಲು: ಮಾಜಿ ಸಚಿವ ಆರ್‌.ಶಂಕರ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಂಗಳವಾರ ಬೆಳಿಗ್ಗೆ ಭೇಟಿ ಮಾಡಿ, ಗುರುವಾರ ನಡೆಯುವ ಸಚಿವ ಸಂಪುಟ ವಿಸ್ತರಣೆಯ ಸಂದರ್ಭವೇ ತಮ್ಮನ್ನು ಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.

ಸೋಮವಾರ ರಾತ್ರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾಗಲೂ ಅವರು ಇದೇ ಬೇಡಿಕೆ ಸಲ್ಲಿಸಿದ್ದರು. ಯಡಿಯೂರಪ್ಪ ಅವರು,ಜೂನ್‌ನಲ್ಲಿ ವಿಧಾನಪರಿಷತ್‌ ಕೆಲವು ಸ್ಥಾನಗಳು ಖಾಲಿ ಆಗಲಿದ್ದು, ಆಗ ಮೇಲ್ಮನೆಗೆ ಆಯ್ಕೆ ಮಾಡುವುದರ ಜತೆಗೆ ಸಚಿವ ಸ್ಥಾನ ನೀಡುವುದಾಗಿಯೂ ಭರವಸೆ ನೀಡಿದ್ದರು.

ಕರಾವಳಿ ಭಾಗದ ಶಾಸಕರಿಗೂ ಸಂಪುಟದಲ್ಲಿ ಪ್ರಾಶಸ್ತ್ಯ ನೀಡಬೇಕು ಎಂಬ ಒತ್ತಾಯ ಪ್ರಬಲವಾಗಿ ಕೇಳಿಬಂದಿದೆ. ದಕ್ಷಿಣ ಕನ್ನಡದಲ್ಲಿ ಸುಳ್ಯದ ಶಾಸಕ ಎಸ್‌.ಅಂಗಾರ ಅತಿ ಹೆಚ್ಚು ಬಾರಿ ಗೆದ್ದಿರುವ ಶಾಸಕ. ಆದರೆ, ಅವರಿಗೆ ಇಲ್ಲಿಯವರೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಎಸ್‌.ಸುನೀಲ್‌ ಕುಮಾರ್‌ ಅವರೂ ಮೂರು ಬಾರಿ ಗೆದ್ದಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಇಬ್ಬರಿಗೂ ಅವಕಾಶ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.