ADVERTISEMENT

7 ರಿಂದ 8 ಸಚಿವರ ಪ್ರಮಾಣ, ಮೂವರಿಗೆ ಕೊಕ್‌ ಸಾಧ್ಯತೆ: ಸಂಪುಟಕ್ಕಿಲ್ಲ ಮುನಿರತ್ನ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 20:30 IST
Last Updated 12 ಜನವರಿ 2021, 20:30 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)   

ಬೆಂಗಳೂರು: ಬಹು ನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆಗೆ ಬುಧವಾರ ಮಧ್ಯಾಹ್ನ 3.50ಕ್ಕೆ ಸಮಯ ನಿಗದಿಯಾಗಿದ್ದು, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರ ಸಂಪುಟ ಸೇರ್ಪಡೆಗೆ ವರಿಷ್ಠರು ಒಪ್ಪಿಗೆ ನೀಡಿಲ್ಲ. ಜತೆಗೆ ಮೂವರು ಸಚಿವರನ್ನು ಕೈಬಿಡುವ ಸಾಧ್ಯತೆಯೂ ಇದೆ.

ಸಂಪುಟ ಸೇರುವವರ ಪಟ್ಟಿ ಬುಧವಾರ ಬೆಳಿಗ್ಗೆ ಬಿಡುಗಡೆಯಾಗಲಿದೆ. ಮುನಿರತ್ನ ಬದಲಿಗೆ ಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ ಅವರಿಗೆ ಸ್ಥಾನ ನೀಡಬಹುದು. ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೆಸರು ಕೇಳಿ ಬಂದಿದ್ದರೂ ಅವರ ಸೇರ್ಪಡೆಗೆ ವರಿಷ್ಠ
ರಿಂದ ಸಂಜೆಯವರೆಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇದ್ದು, ಅದು ಇತ್ಯರ್ಥ ಆದ ಬಳಿಕವೇ ಮುನಿರತ್ನ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬಹುದು ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿ, ಏಳರಿಂದ ಎಂಟು ಶಾಸಕರು ಪ್ರಮಾಣ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. ಕೆಲವು ಶಾಸಕರಿಗೆ ಈ ಸಂಬಂಧ ಸೂಚನೆಯನ್ನೂ ಅವರು ನೀಡಿದ್ದಾರೆ. ಆ ರೀತಿ ಸೂಚನೆ ಪಡೆದವರಲ್ಲಿ ಉಮೇಶ ಕತ್ತಿ ಮತ್ತು ಮುರುಗೇಶ ನಿರಾಣಿ ಪ್ರಮುಖರು.

‘ಸಂಪುಟದಿಂದ ಒಬ್ಬ ಸಚಿವರನ್ನು ಕೈಬಿಡಬೇಕಾಗಬಹುದು. ಯಾರು ಎಂಬ ಬಗ್ಗೆ ಚರ್ಚೆ ನಡೆದಿದೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಮೂವರು ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಬಕಾರಿ ಸಚಿವ ಎಚ್‌.ನಾಗೇಶ್‌ ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೆಸರೂ ಪ್ರಸ್ತಾಪವಾಗಿವೆ.

ಬೆಳಗಾವಿ ಜಿಲ್ಲೆಯವರಾದ ಉಮೇಶ ಕತ್ತಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ಆ ಜಿಲ್ಲೆಗೆ ಪ್ರಾತಿನಿಧ್ಯ ಅತ್ಯಧಿಕವಾಗುತ್ತದೆ. ಕತ್ತಿಯವರಿಗಾಗಿ ಅದೇ ಜಿಲ್ಲೆಯ ಜೊಲ್ಲೆ ತ್ಯಾಗ ಮಾಡುವುದು ಅನಿವಾರ್ಯ. ಹಿರಿಯ ಶಾಸಕ ಅಂಗಾರ ಅವರಿಗೆ ಅವಕಾಶ ಮಾಡಿಕೊಡಲು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೈಬಿಡಬಹುದು ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಜೊಲ್ಲೆ, ‘ಸಂಪುಟದಿಂದ ನನ್ನನ್ನು ಕೈಬಿಡುತ್ತಾರೆ ಎಂಬ ಸುದ್ದಿ ಈ ಬಾರಿಯೂ ಕೇಳಿ ಬಂದಿದೆ. ಈ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ. ಒಂದು ವೇಳೆ ಕೈಬಿಟ್ಟರೆ, ಪಕ್ಷಕ್ಕಾಗಿ ದುಡಿಯಲು ಸಿದ್ಧಳಿದ್ದೇನೆ’ ಎಂದು ಹೇಳಿದ್ದಾರೆ.

ಮಹಿಳಾ ಕೋಟಾದಲ್ಲಿ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್ ಅಥವಾ ಕಾರವಾರದ ರೂಪಾಲಿ ನಾಯ್ಕ್‌ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಪೂರ್ಣಿಮಾ ಅವರು ಗೊಲ್ಲ ಸಮುದಾಯಕ್ಕೆ ಸೇರಿದ್ದರಿಂದ ಆ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದಂತೆಯೂ ಆಗುತ್ತದೆ ಎಂದೂ ಹೇಳಲಾಗುತ್ತಿದೆ.

ಪ್ರಮಾಣ ವಚನ

ಸ್ಥಳ: ರಾಜಭವನದ ಗಾಜಿನ ಮನೆ

ಸಮಯ: ಮಧ್ಯಾಹ್ನ 3.50

ಸಂಭಾವ್ಯ ಸಚಿವರು:

ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌, ಉಮೇಶ ಕತ್ತಿ, ಎಸ್‌. ಅಂಗಾರ, ಸಿ.ಪಿ.ಯೋಗೇಶ್ವರ, ಮುರುಗೇಶ ನಿರಾಣಿ, ಹಾಲಪ್ಪ ಆಚಾರ್‌/ ಅರವಿಂದ ಲಿಂಬಾವಳಿ, ಪೂರ್ಣಿಮಾ/ರೂಪಾಲಿ ನಾಯ್ಕ

ನಾಗೇಶ್‌ ಬೆಂಬಲಿಗರ ಪ್ರತಿಭಟನೆ

ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರನ್ನು ಕೈಬಿಡುವುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಮುಖ್ಯಮಂತ್ರಿಯವರ ನಿವಾಸ ‘ಕೃಷ್ಣಾ’ದ ಮುಂದೆ ಪ್ರತಿಭಟನೆ ನಡೆಸಿದರು.

‘ಬಲಗೈ ಸಮುದಾಯಕ್ಕೆ ಸೇರಿದ ನಾಗೇಶ್‌ ಅವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಕಾರಣರೂ ಆಗಿದ್ದು, ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕಾರಣರಾಗಿದ್ದಾರೆ’ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.