ಆರ್. ಅಶೋಕ ಮತ್ತು ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿರುವ ಅನಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಿಜೆಪಿಯ 18 ಮಂದಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪರಿಶಿಷ್ಟ ಸಮುದಾಯದ ಹಿರಿಯ ಸಚಿವರೊಬ್ಬರು ನನಗೆ ರಕ್ಷಣೆ ಕೊಡಿ ಎಂದು ಸದನದಲ್ಲಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಯಾರ ಒತ್ತಡದಲ್ಲಿದೆ? ಯಾರ ಒತ್ತಡಕ್ಕೆ ಮಣಿದು ತನಿಖೆಗೆ ಆದೇಶ ಮಾಡಲು ಮೀನಾಮೇಷ ಎಣಿಸುತ್ತಿದೆ? ರಾಜ್ಯದ ಒಬ್ಬ ಹಿರಿಯ ಶಾಸಕರು, ಹಾಲಿ ಸಚಿವರಿಗೇ ರಕ್ಷಣೆ ಇಲ್ಲದ ಮೇಲೆ, ಇನ್ನು ನಾಡಿನ ಜನಸಾಮಾನ್ಯರ ಕಥೆ ಏನು? ಎಂದು ಅಶೋಕ ಪ್ರಶ್ನಿಸಿದ್ದಾರೆ.
ಸರ್ಕಾರದ ಧೋರಣೆಯನ್ನು ಪ್ರಶ್ನೆ ಮಾಡುವುದು ವಿಪಕ್ಷಗಳ ಕರ್ತವ್ಯ ಅಲ್ಲವೇ? ಸರ್ಕಾರವನ್ನು ಪ್ರಶ್ನೆ ಮಾಡಿದರೆ ಸದನದಿಂದ ಅಮಾನತು ಮಾಡುವುದು ಯಾವ ನ್ಯಾಯ?. ಇದು ಕೇವಲ ಶಾಸಕರಿಗೆ ಮಾತ್ರವಲ್ಲ, ಅವರನ್ನು ಆರಿಸಿ ಕಳಿಸಿರುವ ಮತದಾರರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ ಎಂದು ಅಶೋಕ ಕಿಡಿಕಾರಿದ್ದಾರೆ.
ಬಿಜೆಪಿ ಇಂತಹ ಸರ್ವಾಧಿಕಾರಿ ಧೋರಣೆಗೆ ಜಗ್ಗುವುದಿಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾಡಿನ ದಲಿತರು, ಹಿಂದುಳಿದವರು ಸೇರಿದಂತೆ ರಾಜ್ಯದ ಏಳೂವರೆ ಕೋಟಿ ಕನ್ನಡಿಗರು ಒಂದಾಗಬೇಕಿದೆ ಎಂದು ಅಶೋಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.