ADVERTISEMENT

ನನ್ನ ಫೋನ್‌ ಕರೆ ಕದ್ದಾಲಿಕೆಯಾಗುತ್ತಿದೆ: ಶಾಸಕ ಅರವಿಂದ್ ಬೆಲ್ಲದ್ ಆರೋಪ

ಪಿಟಿಐ
Published 17 ಜೂನ್ 2021, 14:11 IST
Last Updated 17 ಜೂನ್ 2021, 14:11 IST
ಶಾಸಕ ಅರವಿಂದ್ ಬೆಲ್ಲದ್
ಶಾಸಕ ಅರವಿಂದ್ ಬೆಲ್ಲದ್   

ಬೆಂಗಳೂರು: ‘ನನ್ನ ಫೋನ್‌ ಕರೆ ಕದ್ದಾಲಿಕೆಯಾಗುತ್ತಿದ್ದು, ಯಾರೋ ಕಾಣದ ಕೈಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ’ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರೋಧ ಬಣದಲ್ಲಿ ಗುರುತಿಸಿಕೊಂಡಿರುವ ಅರವಿಂದ್‌ ಬೆಲ್ಲದ್‌ ಮಾಡಿರುವ ಆರೋಪ ಚರ್ಚೆಗೆ ಗ್ರಾಸವಾಗಿದೆ.

ಫೋನ್‌ ಕದ್ದಾಲಿಕೆ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪೊಲೀಸ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಬೆಲ್ಲದ್‌ ತಿಳಿಸಿದ್ದಾರೆ.

ADVERTISEMENT

ಬೆಲ್ಲದ್‌ ಅವರ ಫೋನ್‌ ಕದ್ದಾಲಿಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ‘ಬೆಲ್ಲದ್‌ ಅವರು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ. ಫೋನ್‌ ಕದ್ದಾಲಿಕೆಯಾಗಿದೆ ಎಂದು ಆರೋಪಿಸುವ ಮೂಲಕ ಅಗ್ಗದ ಪ್ರಚಾರ ಪಡೆಯುವ ಹುನ್ನಾರವಾಗಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರತಿಕ್ರಿಯಿಸಿ, ‘ಬೆಲ್ಲದ್‌ ಅವರ ಫೋನ್ ಕದ್ದಾಲಿಕೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಶಾಸಕರು. ಅವರು ಯಾಕೆ ಅಂತಹ ಹೇಳಿಕೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ.

ಶಾಸಕ ಅರವಿಂದ್ ಬೆಲ್ಲದ್ ಸಲ್ಲಿಸಿರುವ ದೂರಿನ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.