ಬೆಂಗಳೂರು: ಉಪಮುಖ್ಯಮಂತ್ರಿ ಹುದ್ದೆಗೆ ಹೊಸಬರ ಬೇಡಿಕೆ ತಾರಕಕ್ಕೇ ರುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ‘ಎಲ್ಲ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸಬೇಕು’ ಎಂದು ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.
ಹೊಸದಾಗಿ ರಮೇಶ ಜಾರಕಿಹೊಳಿ, ಬಿ. ಶ್ರೀರಾಮುಲು, ಆರ್.ಅಶೋಕ ಅವರು ಡಿಸಿಎಂ ಹುದ್ದೆಗೆ ಪೈಪೋಟಿ ನಡೆಸಿರುವುದರಿಂದ ಯಡಿಯೂರಪ್ಪ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈಗಾಗಲೇ ಮೂವರು ಡಿಸಿಎಂ ಹುದ್ದೆಗಳಲ್ಲಿದ್ದಾರೆ.ಜಾರಕಿಹೊಳಿ ಮತ್ತು ಶ್ರೀರಾಮುಲು ಅವರು ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ್ದು, ಒಬ್ಬರಿಗೆ ಕೊಟ್ಟು ಮತ್ತೊಬ್ಬರನ್ನು ಬಿಟ್ಟರೆ, ಅದು ವಿವಾದಕ್ಕೆ ಕಾರಣವಾಗುತ್ತದೆ ಎಂಬ ಚರ್ಚೆ ಬಿಜೆಪಿ ಆಂತರಿಕ ವಲಯದಲ್ಲಿ ನಡೆದಿದೆ.
ಈ ಹಂತದಲ್ಲಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆ ರಾಜ ಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿದೆ. ‘ಉಪಮುಖ್ಯಮಂತ್ರಿ ಸ್ಥಾನ ನೀಡಿ ರುವುದು ಮುಖ್ಯಮಂತ್ರಿ ಮತ್ತು ಪಕ್ಷದ ತೀರ್ಮಾನವಾಗಿದೆ. ರೇಣುಕಾಚಾರ್ಯ ಅವರು ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೂ ತಿರುಗೇಟು ನೀಡಿದ್ದಾರೆ.
ಇದಕ್ಕೆ ಮುನ್ನ ಮಾಧ್ಯಮಪ್ರತಿ ನಿಧಿಗಳ ಜತೆ ಮಾತನಾಡಿದ ರೇಣುಕಾ ಚಾರ್ಯ, ‘ಮುಖ್ಯಮಂತ್ರಿ ದುರ್ಬಲರಾಗಿದ್ದ ಸಂದರ್ಭದಲ್ಲಿ ಹುದ್ದೆಯನ್ನು ನಿಭಾಯಿಸಲು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲಾಗುತ್ತದೆ. ಆದರೆ ಯಡಿಯೂರಪ್ಪ ಮೂರು ದಶಕಗಳಿಂದ ಸಮರ್ಥವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಈಗಲೂ ಅಷ್ಟೇ ಸಾಮರ್ಥ್ಯ ಹೊಂದಿ ದ್ದಾರೆ’ ಎಂದು ಪ್ರತಿಪಾದಿಸಿದರು.
‘ಯಡಿಯೂರಪ್ಪ ಅವರಂತಹ ನಾಯಕತ್ವ ಇರುವಾಗ ಉಪಮುಖ್ಯಮಂತ್ರಿ ಹುದ್ದೆಯ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ ಅವರು, ‘ಪಕ್ಷದ ಹಿತ ದೃಷ್ಟಿಯಿಂದ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದು ಮಾಡು ವುದು ಸೂಕ್ತ’ ಎಂದರು.
‘ದಕ್ಷಿಣ ಭಾರತದಲ್ಲಿ ಬಿಜೆಪಿ ಬೇರು ಬಿಟ್ಟು ಕರ್ನಾಟಕದಲ್ಲಿ ಅಧಿಕಾರ ಹಿಡಿ ಯಲು ಯಡಿಯೂರಪ್ಪ ಅವರ ಶ್ರಮ ದೊಡ್ಡದು. ಅವರ ಬಗ್ಗೆ ಪಕ್ಷದಲ್ಲಿ ಯಾರಿಗೂ ಕಿಂಚಿತ್ತೂ ಅಸಮಾಧಾನ ವಿಲ್ಲ’ ಎಂದು ಹೇಳಿದರು.
ಸೋಮಶೇಖರ್ ರೆಡ್ಡಿ ಲಾಬಿ: ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶ್ರೀರಾಮುಲು ಅವರಿಗೆ 2018 ರ ಚುನಾವಣಾ ಪೂರ್ವದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅದರಂತೆ ಆ ಹುದ್ದೆ ನೀಡಬೇಕು. ಜನಾರ್ದನ ರೆಡ್ಡಿ ಪಕ್ಷದಲ್ಲಿ ಇದ್ದಿದ್ದರೆ, ಇಂತಹ ಅನ್ಯಾಯ ಆಗುತ್ತಿರಲಿಲ್ಲ’ ಎಂದರು.
ಈ ಮಧ್ಯೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಶಾಸಕ ರಮೇಶ ಜಾರಕಿಹೊಳಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದರು ಎನ್ನಲಾಗಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ಬನ್ನಿ ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ ಬಳಿಕ ಸಚಿವ ಸ್ಥಾನಕ್ಕೆ ಲಾಬಿ ಹೆಚ್ಚಾಗಿದೆ. ಹಿರಿಯ ಶಾಸಕ ಉಮೇಶ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಶ್ರೀಮಂತಪಾಟೀಲ, ಕೆ.ಸಿ.ನಾರಾಯಣಗೌಡ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ತಮಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ.
‘ಒತ್ತಡ ಇರುವುದು ನಿಜ’
‘ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡಲು ಸಾಕಷ್ಟು ಒತ್ತಡ ಇರುವುದು ನಿಜ’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಈ ಸಂಬಂಧ ಹಲವು ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ನಾನು ಇಲ್ಲ’ ಎಂದು ಹೇಳಿದರು.
‘ಉಪಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಪ್ರಮುಖರ ಸಭೆಯಲ್ಲೂ ಈ ವಿಷಯ ಚರ್ಚೆ ಆಗಿಲ್ಲ. ಸಭೆ ನಡೆದರೆ ನನ್ನ ಅಭಿಪ್ರಾಯ ಅಲ್ಲಿ ತಿಳಿಸುತ್ತೇನೆ. ಈ ಬಗ್ಗೆ ಮಾತನಾಡಲು ನಾನು ಕಿರಿಯವ. ರಾಜ್ಯದ ಹಿರಿಯ ನಾಯಕರು ಮತ್ತು ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.