ADVERTISEMENT

'ಕಟೀಲ್ ಆಡಿಯೊ ಹಿಂದೆ ಕಾಂಗ್ರೆಸ್‌ನ ಮೀರ್ ಸಾದಿಕ್': ಬಿಜೆಪಿಯ ಆರೋಪ ಯಾರ ಮೇಲೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2021, 10:13 IST
Last Updated 19 ಜುಲೈ 2021, 10:13 IST
   

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಕರ್ನಾಟಕ ರಾಜ್ಯ ಬಿಜೆಪಿ ಪ್ರಶ್ನಿಸಿದೆ.

#ಮಹಾನಾಯಕVsಮೀರ್‌ಸಾದಿಕ್‌ ಎಂಬ ಹ್ಯಾಷ್‌ಟ್ಯಾಗ್ ಹಾಕುವ ಮೂಲಕ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್‌ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ. ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್‌ ಸಾದಿಕ್‌ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ದೂರಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ‌ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ? ಎಂದಿರುವ ಬಿಜೆಪಿ, ನಕಲಿ ದಾಖಲೆ ಸೃಷ್ಟಿಸುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು ಎಂದೂ ಕೂಡ ಬಿಜೆಪಿ ಆರೋಪಿಸಿದೆ.

ಹೋರಾಟವಿಲ್ಲದೆ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!? ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.