ADVERTISEMENT

ಲಂಚ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಮಾಡಾಳ್ ವಿರೂಪಾಕ್ಷಪ್ಪ ಅಸಹಕಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:32 IST
Last Updated 9 ಮಾರ್ಚ್ 2023, 19:32 IST
ಮಾಡಾಳ್ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ಕಚೇರಿಗೆ ಗುರುವಾರ ಮಧ್ಯಾಹ್ನ ಹಾಜರಾದರು
ಮಾಡಾಳ್ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ಕಚೇರಿಗೆ ಗುರುವಾರ ಮಧ್ಯಾಹ್ನ ಹಾಜರಾದರು   

ಬೆಂಗಳೂರು: ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ (ಕೆಎಸ್‌ಡಿಎಲ್‌) ಲಂಚ ಪ್ರಕರಣದ ಮೊದಲ ಆರೋಪಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಿಚಾರಣೆ ನಡೆಸಿದ್ದು, ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರ ನೀಡಿದ್ದರಿಂದ ಶುಕ್ರವಾರವೂ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ.

₹40 ಲಕ್ಷ ಲಂಚ ಪಡೆದ ಆರೋಪದಲ್ಲಿ ಆರೋಪಿಯಾಗಿರುವ ವಿರೂಪಾಕ್ಷಪ್ಪ ಅವರಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಕಚೇರಿಯ ಒಳ ಹೋದರು.

ಲೋಕಾಯುಕ್ತ ಡಿವೈಎಸ್‌ಪಿ ಅಂಥೋಣಿ ಜಾರ್ಜ್ ಮತ್ತು ತಂಡದ ಎದುರು ವಿರೂಪಾಕ್ಷಪ್ಪ ಹಾಜರಾಗಿದ್ದರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ಕೇಳುವ ಪ್ರಶ್ನೆಗೆ ನೇರವಾಗಿ ಉತ್ತರ ನೋಡದೆ ತಾವು ಸಿದ್ಧವಾಗಿ ಬಂದಿದ್ದ ಉತ್ತರವನ್ನಷ್ಟೇ ನೀಡಿದರು. ಕೆಲವು ಪ್ರಶ್ನೆಗಳಿಗೆ ವಿರುದ್ಧವಾದ ಉತ್ತರಗಳನ್ನೂ ನೀಡಿದರು’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ADVERTISEMENT

ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ ಸಿಕ್ಕಿದ ₹40 ಲಕ್ಷ ಲಂಚ ಪ್ರಕರಣದಲ್ಲಿ ಶಾಸಕರು ಮೊದಲ ಆರೋಪಿ. ಈ ಕುರಿತು ಮೊದಲ ಪ್ರಶ್ನೆಯನ್ನು ಕೇಳಿದ್ದಕ್ಕೆ ವಿರೂಪಾಕ್ಷಪ್ಪ ಸರಿ ಉತ್ತರ ನೀಡಲಿಲ್ಲ. ಶಾಸಕರ ನಿವಾಸದಲ್ಲಿ ಸಿಕ್ಕಿದ ₹6.12 ಕೋಟಿ ನಗದು ಬಗ್ಗೆ ಕೇಳಲಾದ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಮೂಲಗಳು ಹೇಳಿವೆ.

ರಾತ್ರಿ 10ಗಂಟೆವರೆಗೂ ವಿಚಾರಣೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.