ADVERTISEMENT

ಪತ್ತೆಯಾಗದ ಶಾಸಕ ಮಾಡಾಳ್‌: ಇಂದಿನಿಂದ ಶೋಧ ಕಾರ್ಯ ಚುರುಕಿಗೆ ನಿರ್ಧಾರ

₹ 40 ಲಕ್ಷ ಲಂಚ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:31 IST
Last Updated 5 ಮಾರ್ಚ್ 2023, 19:31 IST
ಕೆ. ಮಾಡಾಳ್‌ ವಿರೂಪಾಕ್ಷಪ್ಪ
ಕೆ. ಮಾಡಾಳ್‌ ವಿರೂಪಾಕ್ಷಪ್ಪ   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋ‍ಪಿ ಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಇನ್ನೂ ಪತ್ತೆಯಾಗಿಲ್ಲ. ಸತತ ಮೂರನೇ ದಿನವೂ ಲೋಕಾಯುಕ್ತ ಪೊಲೀಸರು ವಿವಿಧೆಡೆ ಶೋಧ ನಡೆಸಿದ್ದಾರೆ.

₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ವಿರೂಪಾಕ್ಷಪ್ಪ ಅವರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದರು. ಗುರುವಾರ ತಡ ರಾತ್ರಿ ಬೆಂಗಳೂರು ತಲುಪಿದ್ದ ವಿರೂಪಾಕ್ಷಪ್ಪ, ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ಹಲವು ತಂಡಗಳಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಶಾಂತ್‌ ಬಂಧಿತರಾಗಿದ್ದ ಖಾಸಗಿ ಕಚೇರಿಯಲ್ಲಿ ಇನ್ನೂ ₹ 1.62 ಕೋಟಿ ಲಂಚದ ಹಣ ವಶಕ್ಕೆ ಪಡೆಯಲಾಗಿತ್ತು. ವಿರೂಪಾಕ್ಷಪ್ಪ ಮನೆಯಲ್ಲಿ ₹ 6.10 ಕೋಟಿ ಪತ್ತೆಯಾಗಿತ್ತು. ಪ್ರಶಾಂತ್‌ ಬ್ಯಾಂಕ್‌ ಖಾತೆಗೆ ₹ 94 ಲಕ್ಷ ಜಮೆ ಆಗಿರುವುದಕ್ಕೆ ತನಿಖಾ ತಂಡ ದಾಖಲೆ ಪತ್ತೆ ಹಚ್ಚಿದೆ. ಈ ವಿಷಯಗಳು ಹಾಗೂ ಕೆಎಸ್‌ಡಿಎಲ್‌ನ ಟೆಂಡರ್‌ ಪ್ರಕ್ರಿಯೆ ಕುರಿತು ಶಾಸಕರನ್ನು ಪ್ರಶ್ನಿಸಲು ತನಿಖಾ ತಂಡ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

ಪ್ರಾಥಮಿಕ ವರದಿ ಸಲ್ಲಿಸಲು ಸಿದ್ಧತೆ
ಪ್ರಶಾಂತ್‌ ಮಾಡಾಳ್‌ ಮತ್ತು ಅವರ ಜತೆ ಬಂಧಿತರಾಗಿರುವ ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು
ನಿರ್ಧರಿಸಿದ್ದಾರೆ.

ಪ್ರಕರಣದ ತನಿಖೆಗೆ ಸಂಬಂಧಿಸಿದ ಪ್ರಾಥಮಿಕ ವರದಿಯೊಂದಿಗೆ ಸೋಮ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಶಾಸಕರ ಪತ್ತೆಗಾಗಿ ಏಳು ಮಂದಿ ಡಿವೈಎಸ್‌ಪಿಗಳ ನೇತೃತ್ವದಲ್ಲಿ ಲೋಕಾಯುಕ್ತದ ಪೊಲೀಸ್‌ ಅಧಿಕಾರಿ ಗಳು ಶೋಧ ನಡೆಸುತ್ತಿದ್ದಾರೆ. ಬೆಂಗ ಳೂರಿನ ವಿವಿಧೆಡೆ, ದಾವಣಗೆರೆ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ನಡೆದಿದೆ. ಶಾಸಕರ ಜತೆ ಇದ್ದ ಅವರ ಹಿರಿಯ ಮಗ ಮಲ್ಲಿಕಾರ್ಜುನ್‌ ಕೂಡ ನಾಪತ್ತೆಯಾಗಿದ್ದಾರೆ. ವಿರೂಪಾಕ್ಷಪ್ಪ ಅವರ ಪತ್ತೆಗೆ ನಿಕಟವರ್ತಿಗಳ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರ ಪತ್ತೆಗೆ ಸೋಮವಾರದಿಂದ ಶೋಧ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌, ಐಜಿಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಲಿದೆ. ಲಂಚ ಪ್ರಕರಣದ ತನಿಖೆಯಲ್ಲಿ ಈವರೆಗೆ ಆಗಿರುವ ಪ್ರಗತಿಯನ್ನು ಪರಾಮರ್ಶಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.