ADVERTISEMENT

ಬಜೆಟ್‌ ಪೂರ್ವಭಾವಿ ಸಭೆಗಳಲ್ಲಿ ಸಾಮಾಜಿಕ ನ್ಯಾಯವಿಲ್ಲ: ‘ಮುಖ್ಯಮಂತ್ರಿ’ ಚಂದ್ರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 15:44 IST
Last Updated 19 ಫೆಬ್ರುವರಿ 2025, 15:44 IST
<div class="paragraphs"><p>ಮುಖ್ಯಮಂತ್ರಿ ಚಂದ್ರು</p></div>

ಮುಖ್ಯಮಂತ್ರಿ ಚಂದ್ರು

   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಬಜೆಟ್‌ ಪೂರ್ವಭಾವಿ ಸಭೆಗಳಿಗೆ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ಮುಖಂಡರನ್ನು ಕರೆದು, ಇದುವರೆಗೂ ಚರ್ಚೆ ನಡೆಸದೇ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ‘ಈಗಾಗಲೇ ದಲಿತ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ–ಸಂಸ್ಥೆಗಳು ಮತ್ತು ನಾಯಕರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಿ, ಬಜೆಟ್‌ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೀರಿ. ಆದರೆ, ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಮುಖಂಡರೊಂದಿಗೆ ಸಭೆ ನಡೆಸದೇ, ಸಚಿವರೊಬ್ಬರೊಬ್ಬರೆ ಎಲ್ಲ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ದೂರಿದ್ದಾರೆ. 

ADVERTISEMENT

‘ಅಲ್ಪಸಂಖ್ಯಾತರಲ್ಲಿ ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಸಿಖ್‌ ಸಮುದಾಯಗಳೂ ಇವೆ. ಆದರೆ, ಇತ್ತೀಚೆಗೆ ಆಳುವವರು ಇದನ್ನು ಮರೆತುಹೋಗಿದ್ದಾರೆ. ಬಜೆಟ್‌ ಪೂರ್ವಭಾವಿ ಸಭೆಗೆ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ಮುಖಂಡರು, ಸಂಘ–ಸಂಸ್ಥೆಗಳನ್ನು ಕರೆಯಬೇಕು. ಈ ಸಮುದಾಯಗಳ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.