ADVERTISEMENT

ಮತದಾರನ ತೀರ್ಪು: 12 ಮಂದಿ 'ಅರ್ಹರು', ಕಾಂಗ್ರೆಸ್ 2, ಜೆಡಿಎಸ್ 0, ಪಕ್ಷೇತರ 1

ಸ್ಪೀಕರ್ ಆದೇಶದ ಮೂಲಕ ಅನರ್ಹರಾದವರಿಗೆ ಮತದಾರರಿಂದ ಅರ್ಹತಾ ಪ್ರಮಾಣಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2019, 10:49 IST
Last Updated 9 ಡಿಸೆಂಬರ್ 2019, 10:49 IST
ಕರ್ನಾಟಕ ಸರ್ಕಾರ ಉಳಿಸಿಕೊಂಡ ಬಿಜೆಪಿ
ಕರ್ನಾಟಕ ಸರ್ಕಾರ ಉಳಿಸಿಕೊಂಡ ಬಿಜೆಪಿ   

ಬೆಂಗಳೂರು:ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಪ್ರಹಸನಗಳೊಂದಿಗೆ ಅನರ್ಹರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಮರುಚುನಾವಣಾ ಕಣದಲ್ಲಿ ನಡೆದ ಸತ್ವ ಪರೀಕ್ಷೆಯಲ್ಲಿ, ಬಿಜೆಪಿ ಟಿಕೆಟ್ ಮೂಲಕ ಕಣಕ್ಕಿಳಿದ 12 ಮಂದಿಯನ್ನು ಅರ್ಹರು ಎಂದು ಮತದಾರರು ಪರಿಗಣಿಸಿ ತೀರ್ಪು ನೀಡಿದ್ದಾರೆ. 3 ಮಂದಿಗೆ ಸೋಲಾಗಿದೆ.

15ರಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಹಾಗೂ 1 ಸ್ಥಾನ ಪಕ್ಷೇತರ ಅಭ್ಯರ್ಥಿ (ಬಿಜೆಪಿ ಬಂಡಾಯ) ಪಾಲಾಗಿದೆ.

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶದ ಅನುಸಾರ, ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳಲು ಶಕ್ತವಾಗಿದ್ದರೆ, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಸೋತು ಸುಣ್ಣವಾಗಿದೆ. ಫಲಿತಾಂಶದ ಪರಿಣಾಮಬಿಜೆಪಿಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಗಿದೆ. ಇದರೊಂದಿಗೆ ಬಿಜೆಪಿಯ ಸಂಖ್ಯಾಬಲವು 105ರಿಂದ 117ಕ್ಕೇರಿದೆ. ಪ್ರಸ್ತುತ 222 ಸದಸ್ಯಬಲವಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವುದು 112 ಮಾತ್ರ.

ADVERTISEMENT

ಸೋಮವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿರುವಂತೆಯೇ ಎಲ್ಲರಲ್ಲಿಯೂ ಬಿಎಸ್ ಯಡಿಯೂರಪ್ಪ ಸರ್ಕಾರದ ಅಳಿವು ಉಳಿವಿನ ಬಗ್ಗೆಯೇ ಸಂದೇಹವಿದ್ದದ್ದು. ಮತಗಟ್ಟೆ ಸಮೀಕ್ಷೆಗಳಲ್ಲಿ ಬಂದ ಫಲಿತಾಂಶಗಳು ಬಹುತೇಕವಾಗಿ ನಿಜವಾಗಿ ಪರಿಣಮಿಸಿವೆ.(ಪಟ್ಟಿ ಇಲ್ಲಿದೆ)

ಈ ಚುನಾವಣಾ ಫಲಿತಾಂಶವು ಈಗಾಗಲೇ ಸರ್ಕಾರ ಉರುಳಿದ್ದಲ್ಲದೆ, ಮೈತ್ರಿಭಂಗವಾಗಿಯೂ ಕುದಿಯುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀರಾ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂದು ಏನಾಗಿತ್ತು?

ಕಾಂಗ್ರೆಸ್‌ನ 13, ಜೆಡಿಎಸ್‌ನ 3 ಹಾಗೂ ಒಬ್ಬ ಪಕ್ಷೇತರ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಬಳಿಕ 105 ಸದಸ್ಯ ಬಲದ ಬಿಜೆಪಿ ಒಬ್ಬ ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಸರ್ಕಾರ ರಚಿಸಿತ್ತು. ರಾಜೀನಾಮೆ ಕೊಟ್ಟ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ನಡೆದಿದ್ದು, ಫಲಿತಾಂಶದ ಬಳಿಕ ವಿಧಾನಸಭೆ ಸದಸ್ಯ ಬಲ 222ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.