ADVERTISEMENT

ಉಪಚುನಾವಣೆ ಫಲಿತಾಂಶ: ಜನಮತ, ಯಾರಿಗೆ ಹಿತ

11 ಗಂಟೆ ಹೊತ್ತಿಗೆ ಫಲಿತಾಂಶ: ಯಡಿಯೂರಪ್ಪಗೆ ನಿರ್ಣಾಯಕ ದಿನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 1:06 IST
Last Updated 9 ಡಿಸೆಂಬರ್ 2019, 1:06 IST
ಚುನಾವಣೆ
ಚುನಾವಣೆ   

ಬೆಂಗಳೂರು:ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿನ ಮತದಾರರು ನೀಡಿದ ತೀರ್ಪು ಸೋಮವಾರ ಪ್ರಕಟವಾಗಲಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಉಪ ಚುನಾವಣಾ ಕಣದಲ್ಲಿರುವ 13 ಅನರ್ಹ ಶಾಸಕರ ಪಾಲಿಗೆ ಈ ದಿನ ನಿರ್ಣಾಯಕವಾಗಿದೆ.

ಕಾಂಗ್ರೆಸ್‌ನ 13, ಜೆಡಿಎಸ್‌ನ 3 ಹಾಗೂ ಒಬ್ಬ ಪಕ್ಷೇತರ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿ ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತ್ತು. 105 ಸದಸ್ಯ ಬಲದ ಬಿಜೆಪಿ ಒಬ್ಬ ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಸರ್ಕಾರ ರಚಿಸಿದೆ. ರಾಜೀನಾಮೆ ಕೊಟ್ಟ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ನಡೆದಿದ್ದು, ಫಲಿತಾಂಶದ ಬಳಿಕ ವಿಧಾನಸಭೆ ಸದಸ್ಯ ಬಲ 222ಕ್ಕೆ ಏರಿಕೆಯಾಗಲಿದೆ.

ಈ ಲೆಕ್ಕಾಚಾರದಲ್ಲಿ ಸೋಮವಾರದ ಫಲಿತಾಂಶದತ್ತ ಮೂರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಹಾಗೂ ರಾಜ್ಯದ ಮತದಾರರು ಕುತೂಹಲದಿಂದ ಕಾಯುತ್ತಿದ್ದಾರೆ.

ADVERTISEMENT

ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ವಿವಿಧ ಸುದ್ದಿವಾಹಿನಿಗಳ ಮತಗಟ್ಟೆ ಸಮೀಕ್ಷೆ ಹಾಗೂ ಪಕ್ಷದ ಆಂತರಿಕ ಲೆಕ್ಕಾಚಾರ ಗಮನಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ‘12ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಫಲಿತಾಂಶದ ದಿನ ಸಿಹಿಸುದ್ದಿ ಕೊಡುತ್ತೇವೆ, ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ’ ಎಂಬ ಭರವಸೆಯ ಮಾತನಾಡಿದ್ದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಚುನಾವಣಾ ಫಲಿತಾಂಶ ಈ ಎಲ್ಲ ಲೆಕ್ಕಾಚಾರ, ತರ್ಕಗಳಿಗೆ ಉತ್ತರ ನೀಡಲಿದೆ.

‘ಅನರ್ಹ’ರಿಗೆ ಸಚಿವಗಿರಿ?: ‘ಎಲ್ಲ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೋ, ಬೇಡವೋ ಎಂಬ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮಾತನಾಡಿದ ಅವರು, ‘ಫಲಿತಾಂಶ ಪ್ರಕಟವಾದ ಬಳಿಕ ಸಂಪುಟ ವಿಸ್ತರಣೆ ಮಾಡಬೇಕೋ, ಪುನರ್‌ರಚಿಸಬೇಕೋ ಎಂಬ ಬಗ್ಗೆ ವರಿಷ್ಠರ ಅಭಿಪ್ರಾಯ ಪಡೆದೇ ಮುಂದುವರಿಯುತ್ತೇವೆ’ ಎಂದರು.

ಬಿಜೆಪಿ ಲೆಕ್ಕಾಚಾರ

*8ರಿಂದ 10 ಸ್ಥಾನಗಳಲ್ಲಿ ಗೆದ್ದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುರಕ್ಷಿತ

* ಕನಿಷ್ಠ 6 ಕ್ಷೇತ್ರಗಳಲ್ಲಿ ಗೆಲ್ಲದೇ ಇದ್ದರೆ ಸರ್ಕಾರಕ್ಕೆ ಆಪತ್ತು ಖಚಿತ

* ಆಗ ಜೆಡಿಎಸ್‌ ನೆರವು ಯಾಚನೆ ಅನಿವಾರ್ಯ ಅಥವಾ ವಿಧಾನಸಭೆ ಸಂಖ್ಯಾಬಲ ಕುಸಿಯುವಂತೆ ಮಾಡಲು ಕಾಂಗ್ರೆಸ್‌–ಜೆಡಿಎಸ್‌ನ ಮತ್ತಷ್ಟು ಶಾಸಕರ ರಾಜೀನಾಮೆ ಕೊಡಿಸುವ ದಾರಿ ಹಿಡಿಯಬೇಕಾಗುತ್ತದೆ

* ಎಲ್ಲ ಅನರ್ಹ ಶಾಸಕರು ಗೆದ್ದರೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಯ ತಲೆನೋವಿಗೆ ದಾರಿ

* ಶಾಸಕರಿಂದ ರಾಜೀನಾಮೆ ಕೊಡಿಸುವಾಗಲೇ ಪ್ರಮುಖ ಖಾತೆಗಳನ್ನು ಕೊಡಲಾಗುವುದು ಎಂಬ ಭರವಸೆ ಕೊಟ್ಟಿರುವುದರಿಂದ, ಹಾಲಿ ಸಚಿವರು ಪ್ರಮುಖ ಖಾತೆಗಳನ್ನು ತ್ಯಾಗ ಮಾಡಬೇಕಾಗುತ್ತದೆ

* ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಪಕ್ಷದ ಹಿರಿಯರನ್ನು ಸಮಾಧಾನಿಸುವ ಸಂಕಷ್ಟ

ಎದುರಾಳಿ ಪಕ್ಷಗಳ ನಡೆ

*ಬಿಜೆಪಿ ಗಮನಾರ್ಹ ಸಾಧನೆ ಮಾಡದೇ ಇದ್ದರೆ ಹಳೆಯ ದೋಸ್ತಿಗಳಾದ ಕಾಂಗ್ರೆಸ್‌–ಜೆಡಿಎಸ್‌ ಮತ್ತೆ ಒಂದಾಗಬಹುದು

* ಕಾಂಗ್ರೆಸ್‌ 8 ಹಾಗೂ ಜೆಡಿಎಸ್‌ 3 ಸ್ಥಾನಗಳಿಗಿಂತ ಹೆಚ್ಚು ಗೆದ್ದಲ್ಲಿ ರಾಜಕೀಯ ಮೇಲಾಟಗಳಿಗೆ ದಾರಿ

* ಬಿಜೆಪಿ ಬಹುಮತ ಕಳೆದುಕೊಂಡ ಸಂದರ್ಭದಲ್ಲಿ ಜೆಡಿಎಸ್‌ ನಾಯಕರ ನಿಲುವನ್ನು ಆಧರಿಸಿ ರಾಜಕೀಯ ಬದಲಾವಣೆ ಆಗಲಿದೆ

* ಮತ್ತೆ ‘ಮೈತ್ರಿ’ ಸರ್ಕಾರ ರಚಿಸುವ ಸನ್ನಿವೇಶ ಒದಗಿದರೆ ಕೆಲವು ದಿನ ರಾಜಕೀಯ ಅಸ್ಥಿರತೆ

* ಕಾಂಗ್ರೆಸ್‌ ಹೀನಾಯವಾಗಿ ಸೋತರೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹುದ್ದೆ ಕಳೆದುಕೊಳ್ಳಬೇಕಾಗಬಹುದು

* ಬಿಜೆಪಿಯೇ ಹೆಚ್ಚು ಗೆದ್ದರೆ ಈಗಾಗಲೇ ‘ಕಮಲ‘ದತ್ತ ವಾಲಿರುವ ತಮ್ಮ ಕೆಲ ಶಾಸಕರನ್ನು ಹಿಡಿದಿಟ್ಟು
ಕೊಳ್ಳುವ ಸಂಕಟ ಕಾಂಗ್ರೆಸ್–ಜೆಡಿಎಸ್‌ ನಾಯಕರಿಗೆ ಬಂದೊದಗಲಿದೆ

***

ಬಿಜೆಪಿ ಕನಿಷ್ಠ 13 ಸ್ಥಾನಗಳನ್ನು ಗೆಲ್ಲುವುದು ಖಚಿತ. ಮೂರೂವರೆ ವರ್ಷಗಳ ಬಳಿಕ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ವಿಜಯ ನಮ್ಮದೇ
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಮಹಾರಾಷ್ಟ್ರ, ಹರಿಯಾಣದ ಫಲಿತಾಂಶ ಮರೆತ ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಕಣ್ಮರೆಯಾಗುತ್ತಿದೆ

-ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.