ADVERTISEMENT

ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅವ್ಯವಹಾರ; ತನಿಖಾ ವರದಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 11:55 IST
Last Updated 9 ಡಿಸೆಂಬರ್ 2020, 11:55 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಂಟಿ ಸದನ ಸಮಿತಿ ರಚಿಸಿ ತನಿಖಾ ವರದಿ ಪಡೆಯಲಾಗುವುದು. ಹಣ ಲೂಟಿ ಮಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದರು.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ವೆಂಕಟ ರೆಡ್ಡಿ ಮುದ್ನಾಳ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉತ್ತರಿಸುತ್ತಿದ್ದ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ’ಘಟಕಗಳ ಸ್ಥಾಪನೆಯಲ್ಲಿ ದೊಡ್ಡ ಹಗರಣ ನಡೆದಿದ್ದು, ಎರಡು ತಿಂಗಳಲ್ಲಿ ತನಿಖಾ ವರದಿ ಪಡೆದು ಸದನದಲ್ಲಿ ಮಂಡಿಸಲಾಗುತ್ತದೆ‘ ಎಂದರು.

ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಘಟಕಗಳ ಕಾರ್ಯಕ್ಷಮತೆ ಬಗ್ಗೆ ಇಪ್‌ಸಾಸ್‌ ಎಂಬ ಸಂಸ್ಥೆಯಿಂದ ಸರ್ವೆ ಮಾಡಿಸಲಾಗಿದೆ. 18500 ಘಟಕಗಳ ಪೈಕಿ ಶೇ 70ರಷ್ಟು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆ ವರದಿ ಸಲ್ಲಿಸಿದೆ. ಶೇ 4ರಷ್ಟು ಘಟಕಗಳು ಸ್ಥಗಿತಗೊಂಡಿವೆ. ಶೇ 26 (1629) ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ಸಂಸ್ಥೆ ತಿಳಿಸಿದೆ’ ಎಂದರು.

ADVERTISEMENT

‘ಶುದ್ಧ ಕುಡಿಯುವ ನೀರಿನ ಘಟಕಗಳ ವಿಚಾರದಲ್ಲಿ ನಾವು ಸುಮ್ಮನೆ ಕುಳಿತಿಲ್ಲ. ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ವಿಚಾರದ ಬಗ್ಗೆ ಚರ್ಚಿಸಿದ್ದೆವು’ ಎಂದು ಅವರು ಹೇಳಿದರು.

ಜೆಡಿಎಸ್‌ನ ವೆಂಕಟ ರಾವ್‌ ನಾಡಗೌಡ, ‘ಘಟಕಗಳು ಸ್ಥಾಪನೆಯಾಗಿ ಮೂರು ವರ್ಷಗಳು ಕಳೆದಿಲ್ಲ. ಆದರೆ, ಶೇ 90ರಷ್ಟು ಘಟಕಗಳು ಸ್ಥಗಿತಗೊಂಡಿವೆ’ ಎಂದರು. ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳು ಮಾರುಕಟ್ಟೆಯಲ್ಲಿ ₹4 ಲಕ್ಷಕ್ಕೆ ಸಿಗುತ್ತವೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆ ₹18 ಲಕ್ಷಕ್ಕೆ ಖರೀದಿಸಿ ಅಳವಡಿಸಿದೆ. ಈ ಬಗ್ಗೆ ತನಿಖೆ ನಡೆಸಿದರೆ ಗಂಟು ಹೊಡೆದವರು ಯಾರು ಎಂಬುದು ಗೊತ್ತಾಗಲಿದೆ‘ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ಆರಗ ಜ್ಞಾನೇಂದ್ರ, ಸಿದ್ದು ಸವದಿ ಒತ್ತಾಯಿಸಿದರು.

ಕಾಂಗ್ರೆಸ್‌ನ ಯು.ಟಿ.ಖಾದರ್‌, ‘ಘಟಕಗಳ ಅನುಷ್ಠಾನದಲ್ಲಿ ಲೋಪ ಆಗಿದೆ’ ಎಂದರು. ಈ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ನನ್ನ ಕ್ಷೇತ್ರದಲ್ಲಿನ ಘಟಕಗಳನ್ನು ಬಂದು ನೋಡಿ’ ಎಂದು ಖಾದರ್‌ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಚ್‌.ಕೆ.ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ವೇಳೆಯಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.