ADVERTISEMENT

ಬಿಎಸ್‌ವೈಗೆ ಸಂಪುಟ ಪರೀಕ್ಷೆ : 'ಅರ್ಹ' ಶಾಸಕರ ಪೈಕಿ ಆರು ಮಂದಿಗಷ್ಟೇ ಸಚಿವ ಸ್ಥಾನ

ಬಿಜೆಪಿ ವರಿಷ್ಠರ ಹುಕುಂ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 20:53 IST
Last Updated 23 ಜನವರಿ 2020, 20:53 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   
""

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ನಿಂದ ವಲಸೆ ಬಂದು ಶಾಸಕರಾಗಿರುವವರ ಪೈಕಿ ಆರು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ವರಿಷ್ಠರು ಸಂದೇಶ ರವಾನಿಸಿದ್ದು, ಸಚಿವರಾಗುವ ಉಮೇದಿನಲ್ಲಿದ್ದ 11 ಶಾಸಕರು ದಿಕ್ಕೆಟ್ಟ ಸ್ಥಿತಿ ತಲುಪಿದ್ದಾರೆ.

ದಾವೋಸ್‌ ಪ್ರವಾಸ ಮುಗಿಸಿ ಬಂದ ತಕ್ಷಣ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಪಕ್ಷದ ವರಿಷ್ಠರ ಸೂಚನೆಯಿಂದಾಗಿ ಸಂಪುಟ ವಿಸ್ತರಣೆ ದೆಹಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ (ಫೆ.11) ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

‘ಆರು ಮಂದಿಗೆ ಮಂತ್ರಿ ಸ್ಥಾನ ನೀಡಲಿದ್ದು, ಯಾರಾಗಬೇಕು ಎಂಬುದನ್ನು ನೀವೇ ನಿರ್ಧರಿಸಿ ತಿಳಿಸಬೇಕು. ವಿಸ್ತರಣೆ ವೇಳೆ ಪಕ್ಷದ ಮೂಲ ಶಾಸಕರಿಗೂ ಅವಕಾಶ ನೀಡಬೇಕಾಗಿದೆ ಎಂದು ‘ಅರ್ಹ’ ಶಾಸಕರ ಗುಂಪಿಗೆ ವರಿಷ್ಠರು ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. ಇದರಿಂದ ಕಂಗಾಲಾಗಿರುವ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಾವೋಸ್‌ ನಿಂದ ಬಂದ ತಕ್ಷಣವೇ (ಶುಕ್ರವಾರ) ಚರ್ಚಿಸಲು ನಿರ್ಧರಿಸಿದ್ದಾರೆ.

ADVERTISEMENT

ಉಪಚುನಾವಣೆಯಲ್ಲಿ ಗೆದ್ದವರು ಮತ್ತು ಸೋತಿರುವ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರನ್ನು ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ‘ಆರೇಳು ಮಂದಿಗೆ ಮಾತ್ರ ಅವಕಾಶ ಎಂದು ಹೇಳಲಾಗುತ್ತಿದೆ.ಸಚಿವರನ್ನಾಗಿ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು. ಈ ಕುರಿತು ಏನೇ ಮಾತನಾಡುವುದಿದ್ದರೂ ಅವರ ಜತೆ ಮಾತನಾಡಿ, ಒಗ್ಗಟ್ಟಿನಿಂದ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಶಾಸಕರೊಬ್ಬರು ತಿಳಿಸಿದರು.

ಪಕ್ಷದ ಹಲವು ಹಿರಿಯ ಶಾಸಕರು ಒಮ್ಮೆಯೂ ಸಚಿವರಾಗಿಲ್ಲ. ಅವರಲ್ಲಿ ಐದು ಅಥವಾ ಆರು ಶಾಸಕರಿಗೆ ಸಚಿವ ಸ್ಥಾನ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹೇಳಿಕೆ ಸರಣಿ
ಡಿ. 9: ಒಂದೆರಡು ದಿನದಲ್ಲೇ ಸಂಪುಟ ವಿಸ್ತರಣೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ.

ಡಿ.19: ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು. ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆಯಾಗಲಿದೆ.

ಜ.6: ವಿದೇಶ ಪ್ರವಾಸಕ್ಕೆ ತೆರಳುವ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ.

ಜ.9: ಅಮಿತ್ ಶಾ ಭೇಟಿಗೆ ದೆಹಲಿಗೆ ಹೋಗಲಿದ್ದು, ಸಮಾಲೋಚನೆ ಬಳಿಕ ವಿಸ್ತರಣೆ ಖಚಿತ

ಜ.11: ಭೇಟಿಗೆ ಶಾ ಸಮಯ ಕೊಟ್ಟಿಲ್ಲ. ಅವರು ರಾಜ್ಯಕ್ಕೆ ಬಂದಾಗ ಚರ್ಚಿಸಿ ವಿಸ್ತರಣೆ ಮಾಡುವೆ

‘ಅರ್ಹ’ರ ಮುಂದಿನ ನಡೆ?
*ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದು

*ಯಡಿಯೂರಪ್ಪ ಹಂತದಲ್ಲಿ ಇತ್ಯರ್ಥವಾಗದಿದ್ದರೆ ಅಮಿತ್ ಶಾ ಅಥವಾ ಜೆ.ಪಿ. ನಡ್ಡಾ ಬಳಿ ಹೋಗಿ ‘ನ್ಯಾಯ’ಕ್ಕಾಗಿ ಬೇಡಿಕೆ ಮಂಡಿಸಬಹುದು

*ಎಲ್ಲ ಪ್ರಯತ್ನ ವಿಫಲವಾದರೆ, ತಾವೇ ಪ್ರತ್ಯೇಕ ಗುಂಪಾಗಿ ಉಳಿದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಪ್ರಯತ್ನ ಮಾಡಬಹುದು

*ಉಪಚುನಾವಣೆಯಲ್ಲಿ ಸೋತವರನ್ನು ಬಿಟ್ಟು ಉಳಿದವರಿಗೆ ಮಂತ್ರಿ ಸ್ಥಾನ ನೀಡಿದರೆ ಒಪ್ಪಿಕೊಳ್ಳಬಹುದು

**
ಯಾವುದೇ ಪ್ರಶ್ನೆಗೂ ಮುಖ್ಯಮಂತ್ರಿ ಮಾತ್ರ ಉತ್ತರ ಕೊಡಬಲ್ಲರು. ಮತ್ಯಾರೂ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಹೋದರೆ, 'ರೇ..'ಪ್ರಶ್ನೆ ಗಳಿಗೆ ಉತ್ತರವಿಲ್ಲ.
-ಶಿವರಾಮ ಹೆಬ್ಬಾರ, ಶಾಸಕ, ಯಲ್ಲಾಪುರ

*
ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಬಂದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸುತ್ತಾರೆ. ಉಳಿದ ವಿಚಾರ ತಿಳಿದಿಲ್ಲ.
-ಬಿ.ಸಿ.ಪಾಟೀಲ, ಶಾಸಕ, ಹಿರೇಕೆರೂರ

ಶಿವರಾಮ ಹೆಬ್ಬಾರ ಹಾಗೂಬಿ.ಸಿ.ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.