ADVERTISEMENT

10 ‘ಅರ್ಹ’ರಿಗಷ್ಟೇ ಸಚಿವ ಭಾಗ್ಯ: ಕತ್ತಿ, ಲಿಂಬಾವಳಿ, ಯೋಗೇಶ್ವರ್‌ಗೆ ನಿರಾಸೆ

ಮೂಲ ಬಿಜೆಪಿ ಶಾಸಕರಿಗೆ ಸದ್ಯಕ್ಕಿಲ್ಲ ಮಂತ್ರಿ ಯೋಗ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ನಿಂದ ಬಂಡೆದ್ದು ಬಿಜೆಪಿಗೆ ವಲಸೆ ಬಂದ ಬಳಿಕ ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ರಾದ 10 ಶಾಸಕರಿಗಷ್ಟೇ ಸಚಿವರಾಗುವ ‘ಯೋಗ’ ಕೊನೆಗೂ ಕೂಡಿ ಬಂದಿದೆ.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಗುರುವಾರ ಬೆಳಿಗ್ಗೆ 10.30 ಕ್ಕೆ ಸಮಯ ನಿಗದಿಯಾಗಿದೆ.

‘ಅರ್ಹ’ ಶಾಸಕರ ಜತೆಯಲ್ಲಿ ಉಮೇಶ ಕತ್ತಿ, ಸಿ.ಪಿ. ಯೋಗೇಶ್ವರ್‌ ಹಾಗೂ ಅರವಿಂದ ಲಿಂಬಾವಳಿ ಅಥವಾ ಹಾಲಪ್ಪ ಆಚಾರ್‌ ಈ ನಾಲ್ವರಲ್ಲಿ ಮೂವರಿಗೆ ಮಂತ್ರಿಗಿರಿ ಸಿಗಲಿದೆ ಎಂದೂ ಪಕ್ಷದ ಮೂಲಗಳು ಹೇಳಿದ್ದವು. ಬುಧವಾರ ನಡೆದ ಬೆಳವಣಿಗೆಯಲ್ಲಿ ಈ ಹಂತದಲ್ಲಿ ‘ಅರ್ಹ’ ರಿಗೆ ಮಾತ್ರ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ನಿರ್ಧರಿಸಿದರು. ಹೀಗಾಗಿ, ಮೂಲ ಬಿಜೆಪಿಯ ಆಕಾಂಕ್ಷಿಗಳು ನಿರಾಸೆ ಪಡುವ ಸ್ಥಿತಿ ಎದುರಾಯಿತು.

ADVERTISEMENT

ಯಡಿಯೂರಪ್ಪ ಅವರು ವರಿಷ್ಠರು ಮತ್ತು ತಮ್ಮ ಆಪ್ತರ ಜತೆ ಇಡೀ ದಿನ ಸಮಾಲೋಚನೆ ನಡೆಸಿ, ಸಂಪುಟಕ್ಕೆ 10 ಮಂದಿಯನ್ನು ಮಾತ್ರ ಸೇರ್ಪಡೆ ಮಾಡುವುದಾಗಿರಾತ್ರಿ 8.30 ರ ವೇಳೆಗೆ ಪ್ರಕಟಿಸಿದರು.

ಸದ್ಯ 16 ಸಚಿವ ಸ್ಥಾನ ಖಾಲಿ ಇದ್ದು, ಬಾಕಿ ಉಳಿಯುವ 6 ಸಚಿವ ಸ್ಥಾನಗಳನ್ನು ಜೂನ್‌ನಲ್ಲಿ ಭರ್ತಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಉಮೇಶ ಕತ್ತಿಯವರಿಗೆ ಸಚಿವ ಸ್ಥಾನ ನೀಡಲು ಈ ಹಿಂದೆಯೇ ತೀರ್ಮಾನಿಸಲಾಗಿದೆ. ಮುಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದೇನೆ’ ಎಂದು ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ. ಅವರಿಗೆ ಬೇರೆ ಜವಾಬ್ದಾರಿ ನೀಡಲಾಗುವುದು’ ಎಂದೂ ಯಡಿಯೂರಪ್ಪ ಹೇಳಿದರು.

ಯೋಗೇಶ್ವರ್‌ ತಂದ ಸಮಸ್ಯೆ: ‘ಆಪರೇಷನ್‌ ಕಮಲ’ದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡುವ ಸಂಬಂಧ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರ ಮಧ್ಯೆ ಭಿನ್ನಮತ ಉಂಟಾಗಿದ್ದರಿಂದ ಮೂವರ ಸೇರ್ಪಡೆ ಸಾಧ್ಯವಾಗಿಲ್ಲ ಎಂದೂ ಹೇಳಲಾಗುತ್ತಿದೆ.

ಯೋಗೇಶ್ವರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪಗೆ ಇಷ್ಟವಿರಲಿಲ್ಲ. ಈ ವಿಷಯದಲ್ಲಿ ನಾಯಕರ ಮಧ್ಯೆ ಭಿನ್ನಮತ
ಉಂಟಾಯಿತು. ಈ ಕಾರಣಕ್ಕಾಗಿ ಮೂಲ ಬಿಜೆಪಿಯವರಿಗೆ ವಿಸ್ತರಣೆ ವೇಳೆ ಅವಕಾಶ ನೀಡದೇ ಇರಲು ನಿರ್ಧರಿಸಲಾಯಿತು ಎಂದೂ ಮೂಲಗಳು ಹೇಳಿವೆ.

***

ಪಕ್ಷದ ವರಿಷ್ಠರ ಜತೆ ಮಾತನಾಡಿ 10 ಶಾಸಕರನ್ನು ಸಂಪುಟಕ್ಕೆ ಸೇರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ದೆಹಲಿಗೆ ಬರುವಂತೆ ವರಿಷ್ಠರು ನನಗೆ ತಿಳಿಸಿದ್ದಾರೆ

- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಸೋತವರಿಗೆ ಮಂತ್ರಿ ಸ್ಥಾನ ನೀಡುತ್ತಾ ಹೋದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಕಲ್ಯಾಣ, ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕಕ್ಕೂ ನ್ಯಾಯ ನೀಡಬೇಕು

ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.