ADVERTISEMENT

ಸಂಪುಟ ವಿಸ್ತರಣೆ: ಅಸಮಾಧಾನ ಹೊರಹಾಕಿದ ಶಿವನಗೌಡ ನಾಯಕ್‌, ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 11:56 IST
Last Updated 19 ಜನವರಿ 2021, 11:56 IST
ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮತ್ತು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ
ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮತ್ತು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ   

ಬೆಂಗಳೂರು: ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ವಿರುದ್ಧ ಮಾತನಾಡದಂತೆ ಪ್ರಮುಖರ ಸಭೆಯಲ್ಲಿ ಸೂಚನೆ ನೀಡಿದ ನಂತರವೂ ಸಚಿವ ಸ್ಥಾನ ಆಕಾಂಕ್ಷಿಗಗಳು ಅಸಮಾಧಾನ ಹೊರಹಾಕುವುದನ್ನು ನಿಲ್ಲಿಸಿಲ್ಲ.

ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮತ್ತು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸಚಿವ ಸ್ಥಾನ ಸಿಗದಿರುವ ಬಗ್ಗೆ ಆಕ್ರೋಶ ಹೊರ ಹಾಕಿದರು.

‘ಈಗಿರುವ ಎಲ್ಲ 32 ಸಚಿವರನ್ನೂ ಕೈಬಿಡಿ. ಹೊಸದಾಗಿ ಸಂಪುಟ ರಚನೆ ಮಾಡಿ’ ಎಂದು ಶಿವನಗೌಡ ಆಗ್ರಹಿಸಿದರು. ‘20 ತಿಂಗಳು ಸಚಿವರಾದವರನ್ನು ಕೈ ಬಿಡಿ. ಇಡೀ ಸಂಪುಟವನ್ನೇ ಪುನರ್‌ ರಚಿಸಿ. ಕೈಬಿಡುವವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಡಿ. ಹಿರಿತನದ ಆಧಾರದಲ್ಲಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ’ ಎಂದೂ ಒತ್ತಾಯಿಸಿದರು.

ADVERTISEMENT

‘ಸಂಪುಟದಲ್ಲಿ ಎಲ್ಲ ಜಿಲ್ಲೆ, ಸಾಮಾಜಿಕ ಪ್ರಾತಿನಿಧ್ಯ ನೀಡಬೇಕು. ಅದನ್ನು ನೋಡಿಕೊಂಡು ಸಚಿವರನ್ನು ಮಾಡಬೇಕು. ಇದು ಮೂಲೆ ಮೂಲೆಗಳಲ್ಲಿರುವ ಪಕ್ಷದ ಶಾಸಕರ ಅಭಿಪ್ರಾಯ. ಕೆಳಹಂತದ ನಾಯಕರಿಗೆ ಅವಕಾಶ ಕೊಡಬೇಕು ಎನ್ನುವುದು ನಮ್ಮ ಒತ್ತಾಯ’ ಎಂದರು.

ಬ್ಲ್ಯಾಕ್‌ ಮೇಲರ್‌ಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮಲ್ಲಿ ಆ ರೀತಿ ಯಾವುದೂ ಆಗಿಲ್ಲ. ಸಚಿವಾಕಾಂಕ್ಷಿಗಳು ಪರಸ್ಪರ ದೂರವಾಣಿ ಸಂಪರ್ಕದಲ್ಲಿದ್ದಾರೆ. ಅಸಮಾಧಾನ ಇರುವುದು ಸಹಜ. ಹೀಗಾಗಿ, ಅವಕಾಶ ಪಡೆದು ಬಂದವರೂ ಸೇರಿದಂತೆ ಎಲ್ಲ ಸಚಿವರನ್ನೂ ಕೈಬಿಟ್ಟು ಹೊಸತಾಗಿ ಸಂಪುಟ ರಚನೆ ಮಾಡಬೇಕು’ ಎಂದೂ ಆಗ್ರಹಿಸಿದರು.

ಮತ್ತೆ ಮತ್ತೆ ಅವಕಾಶ: ‘ರಾಜ್ಯದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದಿದೆ. ಆದರೆ, ಪ್ರತಿ ಬಾರಿಯೂ ಸಚಿವರು ಆಗಿರುವವರೇ ಮತ್ತೆ ಮತ್ತೆ ಆಗುತ್ತಿದ್ದಾರೆ. ಖಾತೆ ನಿಭಾಯಿಸುವ ಶಕ್ತಿ ಇರುವಂಥವರಿಗೆ ಅವಕಾಶ ಕೊಡುತ್ತಿಲ್ಲ’ ಎಂದು ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ನಾನು 1961ರಲ್ಲಿ ರಾಜಕೀಯಕ್ಕೆ ಬಂದವನು. ಆರು ಬಾರಿ ಶಾಸಕ. ನಾನು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಅವಕಾಶ ಕೇಳಿದ್ದೆ. ಅನುಭವಿ ಆಗಿರುವುದರಿಂದ ಇದೆಲ್ಲ ಸಹಜ. ಆದರೆ, ನನಗೆ ಅವಕಾಶ ಸಿಗಲಿಲ್ಲ. ಪ್ರಮುಖರ ಸಭೆಯಲ್ಲಿ ಯಾವುದೇ ಹೇಳಿಕೆ ಕೊಡದಂತೆ ಅಮಿತ್‌ ಶಾ ಸೂಚನೆ ನೀಡಿದ್ದಾರೆ. ಹೀಗಾಗಿ, ಏನೂ ಮಾತನಾಡುವಂತಿಲ್ಲ. ಪಕ್ಷದ ಆದೇಶ ಮೀರಿ ನಾನು ಕೆಲಸ ಮಾಡುವವನಲ್ಲ’ ಎಂದೂ ಹೇಳಿದರು.

‘ಮತ್ತೆ ಸಂಪುಟ ಪುನಾರಚನೆ ಮಾಡಿದಾಗ ಅವಕಾಶ ಕಲ್ಪಿಸಬೇಕು. ಹಾಗೆ ಮಾಡಿದರೆ ಮಾತ್ರ 2023ರಲ್ಲಿ ಪಕ್ಷ, ಸರ್ಕಾರಕ್ಕೆ ಹೆಚ್ಚಿನ ವರ್ಚಸ್ಸು ಬರಲಿದೆ. ಈ ಮೂಲಕ, 150 ಕ್ಷೇತ್ರಗಳನ್ನು ಗೆಲ್ಲಲು ಅನುಕೂಲವಾಗಲಿದೆ’ ಎಂದರು.

ಸಿ.ಡಿ ಮೂಲಕ ಮುಖ್ಯಮಂತ್ರಿಯನ್ನು ಬ್ಲ್ಯಾಕ್‌ ಮೇಲ್ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ‘ಅಯ್ಯೋ.. ಆ ಸಿ.ಡಿ ಏನು ಎಂದೇ ಗೊತ್ತಿಲ್ಲ. ಸಿ.ಡಿಯನ್ನು ಹೇಗೆ ಪ್ಲೇ ಮಾಡಬೇಕು ಎನ್ನುವುದೂ ತಿಳಿದಿಲ್ಲ. ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ನನಗಂತೂ ಬ್ಲ್ಯಾಕ್‌ ಮೇಲ್ ಮಾಡಿ ಸಚಿವ ಸ್ಥಾನ‌ ಪಡೆಯುವ ಸನ್ನಿವೇಶ ಬಂದಿಲ್ಲ’ ಎಂದರು.

‘ನಮ್ಮ ಚಿತ್ರದುರ್ಗ ಜಿಲ್ಲೆ ಹಿಂದುಳಿದಿದೆ. ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರು ಬೇರೆ ಜಿಲ್ಲೆಯವರೇ ಇದ್ದಾರೆ. ಇದರಿಂದ ನಮ್ಮ ಜಿಲ್ಲೆ ಬೆಳವಣಿಗೆ ಕುಂಠಿತವಾಗಿದೆ. ಹೊರಗಿನಿಂದ ಬಂದವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗಿಯಾಗುತ್ತಾರೆ. ಬೇರೆ ಕಾರ್ಯಕ್ರಮದ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ಅವರಿಗೆ ಬಳ್ಳಾರಿ ಬಗ್ಗೆ ಹೆಚ್ಚು ಆಸಕ್ತಿಯಿದೆ. ಹೀಗಾಗಿ, ಬಳ್ಳಾರಿ ಕಡೆ ಆಸಕ್ತಿ ಹೊಂದಿದ್ದಾರೆ’ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.