ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಇಂದು ಕೊನೆ

ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ಅ. 30ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 0:01 IST
Last Updated 19 ಅಕ್ಟೋಬರ್ 2025, 0:01 IST
ಬಸವಾಪಟ್ಟಣದಲ್ಲಿ ಸೋಮವಾರ ನೋಡಲ್ ಅಧಿಕಾರಿ ಡಿ.ಬಿ. ಉಮೇಶ್ ಅವರ ನೇತೃತ್ವದಲ್ಲಿ ಬಾಕಿ ಉಳಿದ ಮನೆಗಳ ಸಮೀಕ್ಷೆ ನಡೆಸಲಾಯಿತು
ಬಸವಾಪಟ್ಟಣದಲ್ಲಿ ಸೋಮವಾರ ನೋಡಲ್ ಅಧಿಕಾರಿ ಡಿ.ಬಿ. ಉಮೇಶ್ ಅವರ ನೇತೃತ್ವದಲ್ಲಿ ಬಾಕಿ ಉಳಿದ ಮನೆಗಳ ಸಮೀಕ್ಷೆ ನಡೆಸಲಾಯಿತು   

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿವಾರು ಸಮೀಕ್ಷೆ) ನಿಯೋಜನೆಗೊಂಡಿರುವ ಶಿಕ್ಷಕರು ಭಾನುವಾರ (ಅ.19) ಸಂಜೆಯವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಆ ಬಳಿಕ ಅವರು ಸಮೀಕ್ಷಾ ಕಾರ್ಯದಿಂದ ಮುಕ್ತರಾಗಲಿದ್ದಾರೆ.

‘ಸಮೀಕ್ಷೆ ಕಾರ್ಯ ಇದೇ 30ರವರೆಗೆ ಮುಂದುವರಿಯಲಿದೆ. ಮನೆ ಮನೆ ಸಮೀಕ್ಷೆಯಲ್ಲಿ ಭಾಗಿ ಆಗದೇ ಇರುವವರು ಆನ್‌ಲೈನ್‌ ಮೂಲಕ ಮಾಹಿತಿ ನೀಡಬಹುದು. ಬಾಕಿ ಇರುವ ಸಮೀಕ್ಷಾ ಕಾರ್ಯದ ಅಂತಿಮ ಚಟುವಟಿಕೆಗಳ ಬಗ್ಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ತಿಳಿಸಿದರು.

‘ರಾಜ್ಯದಲ್ಲಿ (ಜಿಬಿಎ ವ್ಯಾಪ್ತಿ ಹೊರತುಪಡಿಸಿ) ಶನಿವಾರದವರೆಗೆ (ಅ. 18) ಶೇ 96.35ರಷ್ಟು ಮನೆಗಳ ಸಮೀಕ್ಷೆ ಸಂಪೂರ್ಣ ಆಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಶೇ 39.76ರಷ್ಟು ಸಮೀಕ್ಷೆ ಆಗಿದೆ’ ಎಂದೂ ಅವರು ಮಾಹಿತಿ ನೀಡಿದರು.

ADVERTISEMENT

ಜಿಬಿಎ ವ್ಯಾಪ್ತಿ ಬಿಟ್ಟು ರಾಜ್ಯದಾದ್ಯಂತ ಸೆ. 22ರಂದು ಈ ಸಮೀಕ್ಷೆ ಆರಂಭಗೊಂಡಿತ್ತು. ಅ.7ಕ್ಕೇ ಮುಗಿಯಬೇಕಿತ್ತು. ಆದರೆ, ನಿರೀಕ್ಷಿಸಿದ್ದ ಪ್ರಮಾಣದಲ್ಲಿ ಸಮೀಕ್ಷೆ ನಡೆದಿರಲಿಲ್ಲ. ಸಮೀಕ್ಷೆಯ ಒಟ್ಟು ಸ್ಥಿತಿಗತಿ ಕುರಿತಂತೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅ. 7ರಂದು ಸಭೆ ನಡೆಸಿದ್ದರು. ಸಮೀಕ್ಷಕರಾಗಿರುವ ಶಿಕ್ಷಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೀಡಲಾಗಿದ್ದ ದಸರಾ ರಜೆಯನ್ನು ಅ. 18ರವರೆಗೆ ವಿಸ್ತರಿಸಲಾಗಿತ್ತು. 

ಜಿಬಿಎ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಕೆಲಸ ಹಾಗೂ ಇತರೆ ತರಬೇತಿಗಳ ಕಾರಣದಿಂದ ಅ. 4ರಂದು ಸಮೀಕ್ಷೆ ಆರಂಭವಾಗಿದೆ. ಈ ವ್ಯಾಪ್ತಿಯಲ್ಲಿ ನರಕ ಚತುರ್ದಶಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ.

‘ಸರ್ಕಾರದ ಪ್ರಾಯೋಜಿತ ಕೃತ್ಯ’

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ನಿರಾಕರಿಸಿ ನೀಡಿರುವ ಸ್ವಯಂ ಘೋಷಣಾ ಪತ್ರ ಬಹಿರಂಗಗೊಂಡಿರುವುದು ‘ಗೌರವಾನ್ವಿತ ವ್ಯಕ್ತಿಗಳ ತೇಜೋವಧೆ ಮಾಡುವ ಸರ್ಕಾರದ ಪ್ರಾಯೋಜಿತ ಕೃತ್ಯ' ಎಂದು ಜೆಡಿಎಸ್‌ ಆರೋಪಿಸಿದೆ.

ಈ ಕುರಿತು ‘ಎಕ್ಸ್‌'ನಲ್ಲಿ ಕಿಡಿಕಾರಿರುವ ಜೆಡಿಎಸ್, ‘ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮೂರ್ತಿ ದಂಪತಿ ನೀಡಿದ್ದ ಸ್ವಯಂ ದೃಢೀಕರಣ ಪತ್ರವನ್ನು ಸಾರ್ವಜನಿಕಗೊಳಿಸಿರುವುದು ಮಾಹಿತಿ ಸೋರಿಕೆಗೆ ಸ್ಪಷ್ಟ ನಿದರ್ಶನ’ ಎಂದು ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.