ADVERTISEMENT

CET ಕೋಟಾ ಮೀಸಲು ಸೀಟುಗಳು ಉಳಿದರೆ ಮೊದಲ ಸುತ್ತಿನಲ್ಲೇ ಹಂಚಿಕೆ

ಚಂದ್ರಹಾಸ ಹಿರೇಮಳಲಿ
Published 13 ಜನವರಿ 2026, 0:09 IST
Last Updated 13 ಜನವರಿ 2026, 0:09 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಕ್ರೀಡೆ ಸೇರಿದಂತೆ ವಿವಿಧ ಕೋಟಾಗಳಿಗೆ ಮೀಸಲಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮೊದಲ ಸುತ್ತಿನಲ್ಲೇ ಸಾಮಾನ್ಯ ಕೋಟಾದಡಿ ಹಂಚಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಅರ್ಹತೆಯ ಪ್ರಕಾರ ಆಯಾ ಶೈಕ್ಷಣಿಕ ವರ್ಷದಲ್ಲಿ ಲಭ್ಯವಿರುವ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌), ರಾಷ್ಟ್ರೀಯ ಕೆಡೆಟ್‌ ಕಾರ್ಪ್ಸ್‌ (ಎನ್‌ಸಿಸಿ), ಸ್ಕೌಟ್‌ ಮತ್ತು ಗೈಡ್ಸ್‌ ಸೇರಿದಂತೆ ವಿವಿಧ ಕೋಟಾಗಳಿಗೆ ಸೀಟುಗಳನ್ನು ಮೀಸಲಿಡಲಾಗಿದೆ. ಇದುವರೆಗೂ ಮೊದಲ ಸುತ್ತಿನ ಸೀಟು ಹಂಚಿಕೆಯ ನಂತರ ವಿವಿಧ  ಕೋಟಾದ ಸೀಟುಗಳು ಭರ್ತಿಯಾಗದೆ ಉಳಿದರೆ ಎರಡು, ಮೂರನೇ ಸುತ್ತಿಗೆ ಪರಿಗಣಿಸಲಾಗುತ್ತಿತ್ತು. 2026–27ನೇ ಸಾಲಿನಿಂದ ಮೊದಲ ಸುತ್ತಿನಲ್ಲೇ ಎಲ್ಲ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. 

ADVERTISEMENT

‘ಸಿಇಟಿ ಪರೀಕ್ಷೆಯ ಸಮಯದಲ್ಲೇ ವಿವಿಧ ಕೋಟಾದ ಸೀಟುಗಳಿಗಾಗಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಫಲಿತಾಂಶ ಪ್ರಕಟವಾದ ನಂತರ ಎಷ್ಟು ಅಭ್ಯರ್ಥಿಗಳು ಅರ್ಹರಿದ್ದಾರೆ ಎನ್ನುವುದು ಖಚಿತಪಡಿಸಿಕೊಂಡು ಉಳಿಕೆ ಸೀಟುಗಳನ್ನು ಮೊದಲ ಸುತ್ತಿನಲ್ಲೇ ಹಂಚಬಹುದು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜುಗಳನ್ನು ಅರ್ಹತೆಯ ಆಧಾರದಲ್ಲಿ ಪಡೆಯಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ.

ಭರ್ತಿಯಾಗದ ಕ್ರೀಡಾ ಕೋಟಾ: ಪ್ರತಿ ವರ್ಷವೂ ಕ್ರೀಡಾ ಕೋಟಾದ ಸೀಟುಗಳು ಅತಿ ಹೆಚ್ಚು ಖಾಲಿ ಉಳಿಯುತ್ತಿವೆ. ಹೊಸ ಕ್ರೀಡಾ ನೀತಿ ಅನ್ವಯ ಕ್ರೀಡಾ ಕೋಟಾದಲ್ಲಿ ಪ್ರವೇಶ ಬಯಸುವವರು 10ರಿಂದ 12ನೇ ತರಗತಿ ಮಧ್ಯೆ ಎರಡು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು. ಆದರೆ, ಬಹುತೇಕ ವಿದ್ಯಾರ್ಥಿಗಳು 10 ಮತ್ತು 12ನೆಯ ತರಗತಿಯಲ್ಲಿ ಓದಿಗೆ ಗಮನಕೊಡುವ ಕಾರಣ ಕ್ರೀಡಾಕೂಟದಲ್ಲಿ ಭಾಗಹಿಸುವುದಿಲ್ಲ. ಅಲ್ಲದೆ, 96 ವಿವಿಧ ಕ್ರೀಡೆಗಳಿಗೆ ಶೇ 5ರಿಂದ ಶೇ 100ರವರೆಗೆ ವಿಭಿನ್ನ ಕೃಪಾಂಕಗಳನ್ನು ನಿಗದಿ ಮಾಡಲಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌, ಪ್ಯಾರಾ ಒಲಿಂಪಿಕ್‌ನಲ್ಲಿ  ಚಿನ್ನದ ಪದಕ ವಿಜೇತರು ಶೇ 100, ಬೆಳ್ಳಿಗೆ ಶೇ 99 ಹಾಗೂ ಕಂಚಿಗೆ ಶೇ 98 ನಿಗದಿ ಮಾಡಲಾಗಿದೆ.

ಕ್ರೀಡೆಯಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ ರಾಜ್ಯದ ಪ್ರೌಢಶಾಲೆ, ಪಿಯು ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಹಾಗಾಗಿ, 2025–26ನೇ ಸಾಲಿನಲ್ಲಿ ಎಂಜಿನಿಯರಿಂಗ್‌ನಲ್ಲಿ ಕ್ರೀಡಾ ಕೋಟಾಕ್ಕೆ 226 ಸೀಟುಗಳು ಲಭ್ಯವಿದ್ದರೂ ಪ್ರವೇಶ ಪಡೆದವರು 27 ಅಭ್ಯರ್ಥಿಗಳು. ಇನ್ನೂ 199 ಸೀಟುಗಳು ಖಾಲಿ ಉಳಿದಿದ್ದವು. ಸ್ಕೌಟ್‌ ಮತ್ತು ಗೈಡ್ಸ್‌ ಕೋಟಾಕ್ಕೆ ಕೇಂದ್ರ ಸರ್ಕಾರ ನಡೆಸುವ ಪ್ರತ್ಯೇಕ ಪರೀಕ್ಷೆ ತೇರ್ಗಡೆಯಾಗಬೇಕು. ಪರೀಕ್ಷೆಗಳನ್ನು ಪ್ರತಿ ವರ್ಷವೂ ನಿಯಮಿತವಾಗಿ ನಡೆಸುವುದಿಲ್ಲ ಹಾಗಾಗಿ, ಕೋಟಾದಡಿ ಪ್ರವೇಶ ಪಡೆಯಲು ಸಾಧ್ಯವಿಲ್ಲ ಎನ್ನುವುದು ಅಭ್ಯರ್ಥಿಗಳ ದೂರು. ಎನ್‌ಸಿಸಿ, ಎನ್‌ಎಸ್‌ಎಸ್‌ ಕೋಟಾಕ್ಕೂ ಇಂತಹದ್ದೇ ಸಮಸ್ಯೆಗಳಿವೆ. 

ವಿವಿಧ ಕೋಟಾದ ಸೀಟುಗಳನ್ನು ಮೊದಲ ಸುತ್ತಿನಲ್ಲೇ ಹಂಚಿಕೆ ಮಾಡಿದರೆ ಪ್ರತಿಭಾವಂತರಿಗೆ ಉತ್ತಮ ಕಾಲೇಜು ಸಿಗುತ್ತವೆ. ಉಳಿದ ಸುತ್ತುಗಳ ಮೇಲಿನ ಅವಲಂಬನೆ ಕಾಯುವ ವಿಳಂಬ ಇಲ್ಲವಾಗುತ್ತದೆ
ಎಚ್‌.ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ

ಅಂಗವಿಕಲರ ಕೋಟಾಕ್ಕೂ ಇಲ್ಲ ಅರ್ಹರು

ವೈದ್ಯಕೀಯ ಸೇರಿದಂತೆ ಅಂಗವಿಕಲರ ಕೋಟಾದ ಸೀಟುಗಳೂ ಪ್ರತಿ ವರ್ಷ ಉಳಿಕೆಯಾಗುತ್ತಿವೆ. ಅರ್ಹ ಅಭ್ಯರ್ಥಿಗಳಿಲ್ಲದೆ ಎಂಜಿನಿಯರಿಂಗ್‌ನಲ್ಲಿ ಕಳೆದ ವರ್ಷ 3839 ಸೀಟು ವೈದ್ಯಕೀಯದಲ್ಲಿ 176 ಸೀಟುಗಳು ಖಾಲಿ ಉಳಿದಿದ್ದವು. ನಂತರ ಅವುಗಳನ್ನು ಎರಡನೇ ಸುತ್ತಿನಲ್ಲಿ ಸಾಮಾನ್ಯ ಕೋಟಾದಡಿ ಹಂಚಿಕೆ ಮಾಡಲಾಗಿತ್ತು. ‘ಅಖಿಲ ಭಾರತ ಕೋಟಾದಲ್ಲಿ ನೀಟ್‌ನಲ್ಲಿ ಉತ್ತಮ ರ‍್ಯಾಂಕ್‌ ಪಡೆದಿದ್ದೆ. ಮೊದಲ ಸುತ್ತಿನಲ್ಲಿ ಸರ್ಕಾರಿ ಕೋಟಾದ ಅಡಿ ಖಾಸಗಿ ಕಾಲೇಜಿಗೆ ಪ್ರವೇಶ ಪಡೆದೆ. ಉಳಿಕೆ ಸೀಟುಗಳನ್ನು ಮೊದಲ ಸುತ್ತಿಗೆ ಪರಿಗಣಿಸಿದ್ದರೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಬಹುದಿತ್ತು. ಮುಂದಿನ ವರ್ಷದಿಂದ ಮೊದಲ ಸುತ್ತಿನಲ್ಲೇ ಹಂಚಿಕೆ ಮಾಡಿದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಶ್ರೀಹರಿ. 

ವೈದ್ಯಕೀಯ: ಕ್ರೀಡಾಪಟುಗಳಿಗೆ 7 ಸೀಟು

ವೈದ್ಯಕೀಯದಲ್ಲಿ ರಾಜ್ಯ ಕೋಟಾದ ಸೀಟುಗಳು 10559 ಇದ್ದರೂ ಕ್ರೀಡಾ ಕೋಟಾಕ್ಕೆ ಮೀಸಲಿರುವುದು ಕೇವಲ ಏಳು ಸೀಟು ಮಾತ್ರ. ಅಂಗವಿಕಲರ ಕೋಟಾದಲ್ಲಿ 263 ಸೀಟುಗಳು ಇವೆ. ದಶಕದ ಹಿಂದೆ ರಾಜ್ಯ ಕೋಟಾದ ಸೀಟುಗಳ ಸಂಖ್ಯೆ ಕಡಿಮೆ ಇದ್ದಾಗ ನಿಗದಿ ಮಾಡಿದ್ದ ಸೀಟುಗಳನ್ನೇ ಇಂದಿಗೂ ಮುಂದುವರಿಸಲಾಗಿದೆ. ದಂತ ವೈದ್ಯಕೀಯಕ್ಕೆ ನಾಲ್ಕು ಆಯುಷ್‌ಗೆ 16 ಪಶುವೈದ್ಯಕೀಯಕ್ಕೆ ಐದು ಸೀಟುಗಳನ್ನು ಕ್ರೀಡಾ ಕೋಟಾದಲ್ಲಿ ಮೀಸಲಿಡಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.