ADVERTISEMENT

ಎಂಜಿನಿಯರಿಂಗ್‌ ಪ್ರವೇಶ: 5,353 ಸೀಟುಗಳು ಉಳಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 16:58 IST
Last Updated 23 ಸೆಪ್ಟೆಂಬರ್ 2025, 16:58 IST
   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು,15,353 ಸೀಟುಗಳು ಉಳಿಕೆಯಾಗಿವೆ.

ಮೂರನೇ ಸುತ್ತಿನ ಸೀಟು ಹಂಚಿಕೆಯ ನಂತರ ನಿಗದಿತ ಕಾಲೇಜುಗಳಿಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೋಟಿಸ್‌ ನೀಡಿದ್ದು, ಸೀಟ್‌ ಬ್ಲಾಕಿಂಗ್‌ ದಂಧೆಗೆ ಕಡಿವಾಣ ಹಾಕಲು ಇಂತಹ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಪತ್ರ ಬರೆದಿದೆ. 

ವಿಟಿಯು ಸಂಯೋಜನೆ ಹೊಂದಿರುವ ಸರ್ಕಾರಿ ಕಾಲೇಜುಗಳಲ್ಲಿ 1,421, ಖಾಸಗಿ ಕಾಲೇಜುಗಳಲ್ಲಿ 12,065, ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ 1,289 ಸೀಟುಗಳು ಸೇರಿದಂತೆ 15,353 ಸೀಟುಗಳು ಉಳಿದಿವೆ. ಕಂಪ್ಯೂಟರ್‌ ಸೈನ್ಸ್‌, ಕೃತಕ ಬುದ್ಧಿಮತ್ತೆ ಸೇರಿದಂತೆ ಬಹುಬೇಡಿಕೆ ಇರುವ ಸೀಟುಗಳು ಹಂಚಿಕೆಯಾದರೂ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಮೊದಲ ಸುತ್ತಿನಲ್ಲಿ ನೋಟಿಸ್‌ ನೀಡಲಾಗಿದ್ದು, ಅಂತಹ ಕಾಲೇಜುಗಳನ್ನು ಪಟ್ಟಿ ಮಾಡಿ, ಮಾಹಿತಿ ಕಲೆಹಾಕಲಿದೆ.

ADVERTISEMENT

ವೈದ್ಯಕೀಯ: 18,867 ಸೀಟು ಹಂಚಿಕೆ

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಹಾಗೂ ಆಯುಷ್‌ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ
ಪ್ರಕಟವಾಗಿದ್ದು, ಇದುವರೆಗೂ 18,867 ಸೀಟು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಸೆ.26, ಕಾಲೇಜಿಗೆ ಪ್ರವೇಶ ಪಡೆಯಲು ಸೆ.28ರವರೆಗೆ ಅವಕಾಶ ನೀಡಲಾಗಿದೆ. 

ಸೀಟು ಹಂಚಿಕೆ ನಂತರ ವೈದ್ಯಕೀಯ 158, ದಂತ ವೈದ್ಯಕೀಯ 50 ಹಾಗೂ ಆಯುಷ್‌ ಕೋರ್ಸ್‌ನಲ್ಲಿ 6,251 ಸೀಟುಗಳು ಉಳಿದಿವೆ. ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆಯದೇ ಉಳಿಯುವ ಸೀಟುಗಳನ್ನು ಮಾಪ್‌ಅಪ್‌ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.