ADVERTISEMENT

ಸಿನಿಮಾ ಟಿಕೆಟ್ ದರ ಗರಿಷ್ಠ ₹200: ಅಧಿಸೂಚನೆ ಹೊರಡಿಸಿದ ಗೃಹ ಇಲಾಖೆ

75 ಕ್ಕಿಂತ ಕಡಿಮೆ ಆಸನ, ಪ್ರೀಮಿಯಂ ಸೌಲಭ್ಯದ ಮಲ್ಟಿ ಫ್ಲೆಕ್ಸ್‌ಗಳಿಗೆ ಅನ್ವಯವಾಗದು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:45 IST
Last Updated 12 ಸೆಪ್ಟೆಂಬರ್ 2025, 15:45 IST
   

ಬೆಂಗಳೂರು: ರಾಜ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಟಿಕೆಟ್‌ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಈ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದ್ದು, ಕನ್ನಡ ಸೇರಿ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಈ ಆದೇಶ ಅನ್ವಯವಾಗಲಿದೆ. ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನಗಳನ್ನು ಹೊಂದಿರುವ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಮಲ್ಟಿಫ್ಲೆಕ್ಸ್‌ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.

ಯಾವುದೇ ಭಾಷೆಯ ಚಿತ್ರವಾದರೂ ಸರಿ ಗರಿಷ್ಠ ದರ ₹200 ದಾಟುವಂತಿಲ್ಲ. ಟಿಕೆಟ್‌ ಮೇಲೆ ಶೇ 18ರಷ್ಟು ತೆರಿಗೆ ಇರುತ್ತದೆ. ಚಿತ್ರಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ₹150 ಕ್ಕಿಂತ ಕಡಿಮೆ ಆಗಲಿದೆ.

ADVERTISEMENT

ಮಲ್ಟಿಫ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್‌ ದರದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್‌ ದರ ₹2,000–₹3000 ದಾಟುತ್ತಿತ್ತು. ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್‌ ದರವನ್ನು ನಿಗದಿ ಮಾಡಬೇಕು ಎಂಬುದು ಕನ್ನಡ ಚಲನಚಿತ್ರ ರಂಗದ ಬಹುದಿನಗಳ ಬೇಡಿಕೆಯಾಗಿತ್ತು. ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೈಜೋಡಿಸಿದ್ದರು.

‘ಏಳು ವರ್ಷಗಳ ಹೋರಾಟದ ಫಲ’: ರಾಜೇಂದ್ರ ಸಿಂಗ್ ಬಾಬು

‘ಏಳು ವರ್ಷಗಳ ನಮ್ಮ ಹೋರಾಟ ಈಗ ಫಲ ನೀಡಿದೆ’ ಎಂದು ರಾಜೇಂದ್ರ ಸಿಂಗ್ ಬಾಬು ಪ‍್ರತಿಕ್ರಿಯಿಸಿದರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ರಾಜೇಂದ್ರಸಿಂಗ್ ಬಾಬು ಅವರು, ಈ ಹಿಂದೆಯೇ ಆದೇಶ ಆಗಿತ್ತು. ಆದರೆ, ಆಗ ಸರ್ಕಾರದಲ್ಲಿ ಕೆಲವರು ಅದಕ್ಕೆ ಹಿನ್ನಡೆ ಉಂಟು ಮಾಡಿದರು. ಅದರ ಪರಿಣಾಮ, ಆ ಆದೇಶದ ವಿರುದ್ಧ ನ್ಯಾಯಾಲಯದಿಂದ ತಡೆ ತರಲಾಯಿತು. ಕೋಟಿಗಟ್ಟಲೆ ಹಣ ಕೊಟ್ಟು ಪರ ಭಾಷಾ ಚಿತ್ರಗಳನ್ನು ಇಲ್ಲಿಗೆ ತಂದು ಕ‌ನ್ನಡಿಗರ ಹಣ ಲೂಟಿ ಮಾಡುತ್ತಿದ್ದರು. ಈಗ ಅದಕ್ಕೆ ಕಡಿವಾಣ ಬೀಳಲಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಸಾಮಾನ್ಯ ಜನರೂ ಚಲನಚಿತ್ರಗಳನ್ನು ನೋಡಬಹುದಾಗಿದೆ’ ಎಂದರು.

‘ತಮಿಳುನಾಡು, ಆಂಧ್ರದಲ್ಲೂ ಟಿಕೆಟ್‌ ದರ ಕಡಿಮೆ ಇದೆ. ಅಲ್ಲಿ ತೆರಿಗೆಯೂ ಸೇರಿ ಟಿಕೆಟ್‌ ದರ ₹150ರಿಂದ ₹200ರ ಒಳಗೆ ಇದೆ. ಕರ್ನಾಟಕದಲ್ಲಿ ಮಾತ್ರ ಅತ್ಯಂತ ದುಬಾರಿ ಆಗಿತ್ತು. ಇದರಿಂದ ಕನ್ನಡ ಚಿತ್ರಗಳ ಮೇಲೂ ಪರಿಣಾಮ ಬೀರಿತ್ತು. ಹೊಸ ಅಧಿಸೂಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.