ADVERTISEMENT

ಭಾರತ್ ಬಂದ್ | ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 7:31 IST
Last Updated 8 ಡಿಸೆಂಬರ್ 2020, 7:31 IST
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ   

ಬೆಂಗಳೂರು: ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಭಾರತ್‌ ಬಂದ್‌ ಉದ್ದೇಶಿಸಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸಚಿವ ಕೆ.ಸುಧಾಕರ್‌ ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅವರು, ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯಲಿದ್ದು, ರೈತರು ಹೆಚ್ಚಿನ ಲಾಭ ಗಳಿಸಲು ಈ ಕಾಯ್ದೆಗಳು ನೆರವು ನೀಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷಗಳು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕಾಯ್ದೆಗಳನ್ನು ವಿರೋಧಿಸುತ್ತಿವೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

ಸಚಿವ ಸುಧಾಕರ್‌ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಜನರ ವಿಶ್ವಾಸ ಕಳೆದುಕೊಂಡು ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಹತಾಶಗೊಂಡಿರುವ ವಿಪಕ್ಷಗಳು ರೈತರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿವೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ವಿಸ್ತೃತ ಮಾರುಕಟ್ಟೆ ಕಲ್ಪಿಸಿ, ಅನ್ನದಾತರ ಆದಾಯ ಹೆಚ್ಚಿಸುವ ಸದುದ್ದೇಶ ಹೊಂದಿದ್ದು, ಈಗಿರುವ ಎಪಿಎಂಸಿ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಸಹ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು, ಡಿಎಂಕೆ ಪ್ರಣಾಳಿಕೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಆಮರೀಂದರ್ ಸಿಂಗ್ ಅವರ ಹೇಳಿಕೆಗಳೂ ಈ ಹಿಂದೆ ಈ ಸುಧಾರಣೆಗಳನ್ನು ಬೆಂಬಲಿಸಿದ್ದವು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ನವೆಂಬರ್ 23ರಂದು ಕೇಂದ್ರದ ಮಸೂದೆಗಳು ಜಾರಿಗೆ ಬರುವಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಇದೇ ರೀತಿಯ ಕೃಷಿ ಸುಧಾರಣೆಗಳನ್ನು ತರಲು ಮುಂದಾಗಿತ್ತು ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಇದೇ ಭರವಸೆ ನೀಡಲಾಗಿತ್ತು. ಅಂದಿನ ಕೇಂದ್ರ ಕೃಷಿ ಸಚಿವರಾಗಿದ್ದ ಶ್ರೀ ಶರದ್ ಪವಾರ್ ಅವರು ಈ ಸುಧಾರಣೆಗಳನ್ನು ತರಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.