
ಕುರಿಗಾಹಿಗಳು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಶಾಖ ಪಡೆದರು/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಶೀತ ಗಾಳಿ ಮುಂದುವರಿಯುವ ಸಾಧ್ಯತೆಯಿದೆ. ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಒಳನಾಡಿನ ಕೆಲ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 7.5 ಡಿಗ್ರಿ ಸೆಲ್ಸಿಯಸ್‌ವರೆಗೂ ಕುಸಿತವಾಗಿದೆ.
ಬೀದರ್‌ನಲ್ಲಿ ತೀವ್ರ ಶೀತ ಗಾಳಿ ಕಾಣಿಸಿಕೊಂಡ ಪರಿಣಾಮ, ಅಲ್ಲಿ ಕನಿಷ್ಠ ಉಷ್ಣಾಂಶವು 7.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತವಾಗಿತ್ತು. ರಾಯಚೂರು (9.4 ಡಿಗ್ರಿ ಸೆಲ್ಸಿಯಸ್), ಧಾರವಾಡ (9.5 ಡಿಗ್ರಿ ಸೆಲ್ಸಿಯಸ್) ಹಾಗೂ ವಿಜಯಪುರ (9.8 ಡಿಗ್ರಿ ಸೆಲ್ಸಿಯಸ್) ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿತ್ತು.
ಕರಾವಳಿ ಹೊರತು ಪಡಿಸಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಕೆಲವೆಡೆ ದಟ್ಟವಾದ ಮಂಜು ಕೂಡ ಕಾಣಿಸಿಕೊಂಡ ಪರಿಣಾಮ ಚಳಿ ಹೆಚ್ಚಾಗಿತ್ತು.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮುಂಜಾನೆ ದಟ್ಟವಾದ ಮಂಜು ಕವಿಯುವ ಸಾಧ್ಯತೆಯಿದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 27 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.