ADVERTISEMENT

ಕಮಿಷನ್ ದುಪ್ಪಟ್ಟು: ರಾಹುಲ್, ಖರ್ಗೆಗೆ ಪತ್ರ ಬರೆಯಲು ಗುತ್ತಿಗೆದಾರರ ಸಂಘದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:20 IST
Last Updated 29 ಜನವರಿ 2026, 23:20 IST
ಆರ್‌. ಮಂಜುನಾಥ್‌, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ
ಆರ್‌. ಮಂಜುನಾಥ್‌, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ   

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ‘ಕಮಿಷನ್‌ ಭೂತ’ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ಮತ್ತೆ ಮುನ್ನೆಲೆಗೆ ಬಂದಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಮಾಡಿದ್ದ ಆರೋಪ, ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ನ ಹೋರಾಟಕ್ಕೆ ಪ್ರಬಲ ಅಸ್ತ್ರವಾಗಿತ್ತು. ‘ಶೇ 40ರಷ್ಟು ಕಮಿಷನ್ ಸರ್ಕಾರ’ ಎಂದು ಆರೋಪಿಸಿದ್ದ ಕಾಂಗ್ರೆಸ್‌, ಸರ್ಕಾರದ ವಿರುದ್ಧ ಅಭಿಯಾನವನ್ನೇ ನಡೆಸಿತ್ತು. 

ಈಗ ಮತ್ತೆ ದನಿ ಎತ್ತಿರುವ ಗುತ್ತಿಗೆದಾರರ ಸಂಘ, ‘ರಾಜ್ಯದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಹಣ ಬಿಡುಗಡೆಗೆ ಕಮಿಷನ್‌ ನೀಡಬೇಕು. ಇದರ ಪ್ರಮಾಣವೂ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟಾಗಿದೆ’ ಎಂದು ಆರೋಪಿಸಿದೆ. 

ADVERTISEMENT

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಸಭೆ ಕರೆದರೆ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮಾಹಿತಿಯನ್ನು ಎಲ್ಲ ದಾಖಲೆಗಳೊಂದಿಗೆ ಅವರಿಗೇ ನೀಡುತ್ತೇವೆ. ಅವರೇ ಸೂಕ್ತ ಕ್ರಮ ಕೈಗೊಳ್ಳಲಿ. ಮೂರು ವರ್ಷದಿಂದ ಬಿಲ್‌ ಬಾಕಿ ಬಿಡುಗಡೆ ಆಗದೆ ನಾವು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಮನೆ, ಚಿನ್ನ ಅಡವಿಟ್ಟು ಹಣ ತಂದು, ಕಾಮಗಾರಿ ಮುಗಿಸಿದ್ದೇವೆ. ಮುಖ್ಯಮಂತ್ರಿಯವರು ಒಂದು ಬಾರಿ ನಮ್ಮ ಸ್ಥಾನದಲ್ಲಿ ನಿಂತು ನೋಡಲಿ’ ಎಂದು ಆಗ್ರಹಿಸಿದರು.

‘ಮೂರು ವರ್ಷದ ಹಿಂದೆ ಮುಗಿದಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿಸಿಲ್ಲ. ಹಿಂದಿನ ಸರ್ಕಾರ ಮಾಡಿದ್ದು ಎಂದು ಹೇಳುವುದರಲ್ಲಿ ಯಾವುದೇ ಹುರುಳಿಲ್ಲ. ಇವರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ಮುಖ್ಯಮಂತ್ರಿ ಅವರು ಆಗಾಗ್ಗೆ ನಮ್ಮನ್ನು ಔಪಚಾರಿಕವಾಗಿ ಭೇಟಿ ಮಾಡಿದ್ದಾರೆಯೇ ಹೊರತು ಅಧಿಕೃತವಾಗಿ ಸಭೆ ಮಾಡಿಲ್ಲ. ನಮ್ಮ ಸಮಸ್ಯೆ ಕೇಳಿಲ್ಲ’ ಎಂದು ದೂರಿದರು.

‘ಈ ಎರಡೇ ಇಲಾಖೆಯಲ್ಲ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಬಿಲ್ ಹಣ ಬಿಡುಗಡೆ ಆಗಬೇಕೆಂದರೆ, ಕಮಿಷನ್‌ ನೀಡಲೇಬೇಕು. ಹಿಂದಿನ ಸರ್ಕಾರಕ್ಕಿಂತಲೂ ಅದು ಹೆಚ್ಚಾಗೇ ಇದೆ. ನಾವು ಕಷ್ಟಪಟ್ಟು ದುಡಿದಿದ್ದೇವೆ. ನಾವು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಸ್ಪಂದಿಸದಿದ್ದರೆ ಹೋರಾಟವೇ ನಮ್ಮ ಮುಂದಿರುವ ದಾರಿ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಇಷ್ಟೊಂದು ಹಣ ಬಾಕಿ ಇರಿಸಿಕೊಂಡುವುದರ ಬಗ್ಗೆ, ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆದು, ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿಕೊಳ್ಳಲು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ. ನಂದಕುಮಾರ್‌ ತಿಳಿಸಿದರು.

ನಗರಾಭಿವೃದ್ಧಿ ವಸತಿಯೇ ಗುರಿ

‘ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳು ಆರ್‌.ಟಿ. ನಗರ ರಾಜಾಜಿನಗರದಲ್ಲಿ ಕಚೇರಿ ಮಾಡಿಕೊಂಡಿದ್ದು ಇಲಾಖೆಯನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ಮಂಜುನಾಥ್ ಆಪಾದಿಸಿದರು. ‘ಇಲಾಖೆಯ ಮುಖ್ಯ ಎಂಜಿನಿಯರ್‌ಗಳನ್ನು ಅಲ್ಲಿಗೆ ಕರೆಯಿಸಿ ತಮಗೆ ಬೇಕಾದ ರೀತಿಯಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸುತ್ತಿದ್ದಾರೆ. ಪ್ಯಾಕೇಜ್‌ ಟೆಂಡರ್ ಬೇಡ ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದರೂ ಅದನ್ನೇ ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ಸಚಿವ ಬೈರತಿ ಸುರೇಶ್‌ ಅವರಿಗೆ ಮೂರು ಬಾರಿ ಪತ್ರ ಬರೆದು ಚರ್ಚಿಸುವಂತೆ ಕೋರಿದ್ದರೂ ಅವರು ಪ್ರತಿಕ್ರಿಯಿಸಿಲ್ಲ. ಅವರು ಸಭೆ ನಡೆಸಿದರೆ ಎಲ್ಲ ರೀತಿಯ ಭ್ರಷ್ಟಾಚಾರದ ಮಾಹಿತಿಯನ್ನು ಒದಗಿಸಲಾಗುತ್ತದೆ’ ಎಂದು ಮಂಜುನಾಥ್‌ ಹೇಳಿದರು. ‘ವಸತಿ ಇಲಾಖೆಯಲ್ಲಿ ಸಚಿವರ ಗಮನಕ್ಕೆ ಬಾರದೆ ಕೆಲವರು ಒಂದು ಕೂಟ ಮಾಡಿಕೊಂಡು ಅವರಿಗಷ್ಟೇ ಟೆಂಡರ್‌ ಆಗುವ ರೀತಿಯಲ್ಲಿ ಮಾಡುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಚಿವ ಜಮೀರ್‌ ಅಹಮದ್‌ಖಾನ್‌ ಅವರಿಗೆ ಕೋರಲಾಗಿದೆ. ಅವರಿಗೆ ಆರೋಗ್ಯ ಸಮಸ್ಯೆ ಇದ್ದು ಒಂದೆರಡು ದಿನಗಳಲ್ಲಿ ಸಮಸ್ಯೆ ನಿರ್ಮೂಲನೆ ಮಾಡುವ ಭರವಸೆ ನೀಡಿದ್ದಾರೆ’ ಎಂದರು.

ಮಾರ್ಚ್ 5ರಿಂದ ಮುಷ್ಕರ:

ಕಾಮಗಾರಿ ಸ್ಥಗಿತ  ರಾಜ್ಯ ಸರ್ಕಾರ ಮಾರ್ಚ್ 5ರೊಳಗೆ ಬಾಕಿ ಇರುವ ₹37 ಸಾವಿರ ಕೋಟಿ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ತಿಳಿಸಿದರು. ‘ಬಿಲ್‌ ಪಾವತಿ ವಿಳಂಬವಾಗಿರುವುದರಿಂದ ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರರೊಬ್ಬರು ಸಾಲಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಾಜ್ಯದಲ್ಲಿರುವ 1.50 ಲಕ್ಷ ಗುತ್ತಿಗೆದಾರರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ’ ಎಂದರು. ‘2021-22 2022-23 2023-24ರಿಂದ ₹37 ಸಾವಿರ ಕೋಟಿಗೂ ಹೆಚ್ಚು ಹಣ ಬಾಕಿ ಉಳಿದಿದೆ. 2025ರ ಏಪ್ರಿಲ್‌ ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರಿಲ್ಲ’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ’

‘2025–26ನೇ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ₹5000 ಕೋಟಿ ಯೋಜನೆಗಳನ್ನು ಪ್ರಕಟಿಸಲಾಗಿದೆ. ಈವರೆಗೆ ಒಂದೂ ಟೆಂಡರ್ ಮಾಡಿಲ್ಲ. ಕಳೆದ ಬಾರಿಯೂ ಇದೇ ರೀತಿಯಾಗಿ ಮಾರ್ಚ್‌ನಲ್ಲಿ ಆತುರದಲ್ಲಿ  ನಿರ್ಮಿತಿ ಕೇಂದ್ರದವರಿಗೆ ಟೆಂಡರ್‌ ನೀಡಿದ್ದರು. ಏಳು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಿದ್ದರೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ’ ಎಂದು ಸಂಘದ ಗೌರವ ಅಧ್ಯಕ್ಷ ಜಗನ್ನಾಥ್‌ ಬಿ. ಶೇಗಜಿ ಹೇಳಿದರು. ‘ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣವನ್ನು ಆಯಾ ವರ್ಷ ಉಪಯೋಗಿಸದಿದ್ದರೆ ಅದು ‘ಲ್ಯಾಪ್ಸ್‌’ ಆಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇವೆ. ಆದರೆ ಯಾರೂ ಕ್ರಮ ಕೈಗೊಂಡಿಲ್ಲ’ ಎಂದರು.

ಗಾಳಿಯಲ್ಲಿ ಗುಂಡು ಹಾರಿಸಬೇಡಿ: ಬೈರತಿ ಸುರೇಶ್

‘ಗುತ್ತಿಗೆದಾರರು ತಮ್ಮ ಆರೋಪಗಳಿಗೆ ಸಾಕ್ಷ್ಯಾಧಾರ ನೀಡದೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡ ಅಂತಿಮಗೊಳಿಸುತ್ತದೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ’  ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪದೇಪದೇ ಸಚಿವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದರೆ ಇಲಾಖೆ ನಡೆಸುವುದಾದರೂ ಹೇಗೆ? ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಬೇಡ’ ಎಂದರು. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಸಂಘದ ಅಧ್ಯಕ್ಷ ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು. ಹಣಕಾಸು ಇಲಾಖೆ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ ₹200 ಕೋಟಿ ಬಿಡುಗಡೆ ಮಾಡಲಾಗುತ್ತದೆ’ ಎಂದು ಬೈರತಿ ಸುರೇಶ್ ತಿಳಿಸಿದರು.

ಶೇ 65 ಲಂಚದ ಸರ್ಕಾರ: ಸುನಿಲ್ ಆರೋಪ

ಅಬಕಾರಿ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದು ಶೇ 65ರಷ್ಟು ಲಂಚ ಹೊಡೆಯುವ ಸರ್ಕಾರ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್ ಅವರು ವಿಧಾನಸಭೆಯಲ್ಲಿ ಆರೋಪಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು  ‘ಸದನದಲ್ಲಿ ಬೇರೆ ಯಾವುದೋ ವಿಷಯಕ್ಕೆ ನಿರ್ಣಯ ತೆಗೆದುಕೊಳ್ಳುವುದಲ್ಲ ಶೇ 65ರ ಲಂಚದ ಸರ್ಕಾರ ತಮ್ಮದು ಎಂಬ ಒಂದು ನಿರ್ಣಯವನ್ನು ಸದನದಲ್ಲಿ ತೆಗೆದುಕೊಳ್ಳಲಿ’ ಎಂದರು. ‘ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಅವರೇ ಆರೋಪಿಸಿದ್ದಾರೆ. ಕರ್ನಾಟಕ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಕಮಿಷನ್ ಹಾವಳಿ ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ದೂರಿದೆ’ ಎಂದು ಹೇಳಿದರು. ‘ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರತಿ ಚದರ ಅಡಿಗೆ ಇಂತಿಷ್ಟು ಹಣ ನೀಡಬೇಕು ಎಂದು ಬಿಲ್ಡರ್‌ಗಳಿಗೆ ದರ ನಿಗದಿ ಮಾಡಿ ವಸೂಲಿ ಮಾಡಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಟೆಂಡರ್‌ ಎಲ್‌ಒಸಿ ಮತ್ತು ಅಧಿಕಾರಿಗಳ ವರ್ಗಾವಣೆಗೂ ದರ ನಿಗದಿ ಮಾಡಲಾಗಿದೆ. ಭ್ರಷ್ಟಾಚಾರ ಮತ್ತು ದುರಾಡಳಿತಕ್ಕಾಗಿ ಈ ಸರ್ಕಾರವನ್ನು ವಜಾ ಮಾಡಬೇಕು’ ಎಂದು ಸುನಿಲ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.