ADVERTISEMENT

ನಕಲಿ ಗಾಂಧಿ ಕುಟುಂಬದವರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿ ಇದೆಯೇ?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 10:24 IST
Last Updated 4 ಅಕ್ಟೋಬರ್ 2021, 10:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಖಿಂಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆಪಡೆದ ವಿಚಾರವಾಗಿ ‘ಕೈ’ ನಾಯಕರು ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ. ಬಿಜೆಪಿಯದ್ದು ತಾಲಿಬಾನಿ ಮನಸ್ಥಿತಿ ಎಂದು ಕಾಂಗ್ರೆಸ್ ಟೀಕಿಸಿದ್ದು, ಕಮಲ ಪಾಳಯವೂ ಇದಕ್ಕೆ ತೀಕ್ಷ್ಣ ತಿರುಗೇಟು ನೀಡಿದೆ.

‘ರೈತರ ಶವವನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವ ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿಯಿದೆಯೇ? ಇದ್ದಿದ್ದರೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾದಾಗ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಏಕೆ ಸಾಂತ್ವನ ಹೇಳಲಿಲ್ಲ? ಆಗವರು ಇಟಲಿಯ ಪ್ರವಾಸದಲ್ಲಿದ್ದರೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ವಿಡಿಯೋ ನೋಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಮೇಲೆ ತಾಲಿಬಾನಿ ಶೈಲಿಯಲ್ಲಿ ಹಲ್ಲೆ ನಡೆಸಿತ್ತು. ಅನ್ನದಾತರ ಮೇಲೆ ಈ ಮೃಗೀಯ ದಾಳಿ ನಡೆಸಿದ್ದ ಸಿದ್ದರಾಮಯ್ಯ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ‘ನಕಲಿ ಪ್ರಜಾಪ್ರಭುತ್ವವಾದಿ ಸಿದ್ದರಾಮಯ್ಯ ಅವರಿಗೆ ಚುನಾಯಿತ ಸರ್ಕಾರವನ್ನು ಬುಡಮೇಲುಗೊಳಿಸಿ ಎಂದು ಆಗ್ರಹಿಸುವುದರಿಂದ ವಿಕೃತ ಆನಂದ ಲಭಿಸುತ್ತದೆಯೇ? ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ವಿಚಾರದಲ್ಲಿ ಪಿಎಚ್‌ಡಿ ಪಡೆದ ನಕಲಿ ಗಾಂಧಿ ಕುಟುಂಬದ ಸೇವಕರಿಂದ ಇನ್ನೇನು ನಿರಿಕ್ಷೆ ಮಾಡಲು ಸಾಧ್ಯ?’ ಎಂದು ಉಲ್ಲೇಖಿಸಿದೆ.

‘ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ರೈತರ ಮೈ ನೀಲಿಗಟ್ಟುವಂತೆ ಹೊಡೆಸಿದ್ದು ರಾವಣನೋ, ಕೀಚಕನೋ? ರೈತ ಮಹಿಳೆಯರಿಗೆ ಬಡಿದು ಕಣ್ಣೀರು ಹರಿಸಿದ್ದು ದುರ್ಯೋಧನನೋ, ದುಶ್ಯಾಸನನೋ? ನಿಮ್ಮ ಬಳಿ ಉತ್ತರವಿದೆಯೇ ಡಿಕೆಶಿ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.