ADVERTISEMENT

Karnataka Politics: | ಡಿಕೆಶಿ ಬಣ; ದೆಹಲಿ ‘ರಾಜಕಾರಣ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 23:40 IST
Last Updated 21 ನವೆಂಬರ್ 2025, 23:40 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ನವದೆಹಲಿ: ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಪ್ತರ ಬಣ ತನ್ನ ಚಟುವಟಿಕೆಯನ್ನು ಚುರುಕುಗೊಳಿಸಿದೆ. 

ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು ಹಾಗೂ ಹಲವು ಶಾಸಕರು ರಾಷ್ಟ್ರ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ಮೊಕ್ಕಾಂ ಹೂಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರನ್ನು ಭೇಟಿ ಮಾಡಿದ್ದಾರೆ.

ADVERTISEMENT

ಶಿವಕುಮಾರ್‌ ನಿಷ್ಠರಾಗಿರುವ ಆರು ಶಾಸಕರ ಗುಂಪು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿತು. ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಶುಕ್ರವಾರ ಮಧ್ಯಾಹ್ನ ಭೇಟಿ ಮಾಡಿ ಸಮಾಲೋಚಿಸಿದರು. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕೆಲವು ಶಾಸಕರು ಒತ್ತಾಯಿಸಿದರೆ, ಸಂಪುಟ ‍ಪುನರ್ ರಚನೆ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸುವಂತೆ ಇನ್ನೂ ಕೆಲವು ಶಾಸಕರು ಮನವಿ ಮಾಡಿದರು.

‘ಈ ನಡುವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಹಾಗೂ ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರಿಗೆ ಕರೆ ಮಾಡಿ ಶಾಸಕರ ದೆಹಲಿ ಪ್ರವಾಸಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು. ಇದರಿಂದ ಅನಗತ್ಯ ಊಹಾಪೋಹ ಸೃಷ್ಟಿಯಾಗುತ್ತದೆ ಹಾಗೂ ಸರ್ಕಾರದ ವರ್ಚಸ್ಸಿಗೆ ಹಾನಿ ಆಗುತ್ತದೆ ಎಂಬುದಾಗಿ ಎಚ್ಚರಿಸಿದರು’ ಎಂದು ಮೂಲಗಳು ತಿಳಿಸಿವೆ. 

‘ಪಕ್ಷದ ನಾಯಕರನ್ನು ಭೇಟಿಯಾಗಿ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ ವಿನಂತಿಸಿದೆ. ನಾಯಕತ್ವ ಬದಲಾವಣೆಗೆ ನಾನು ಮನವಿ ಮಾಡಿಲ್ಲ. ಅದನ್ನು ನಿರ್ಧರಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು‘ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸುದ್ದಿಗಾರರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.