ADVERTISEMENT

ಡಿಕೆಶಿ ಸಮ್ಮುಖದಲ್ಲಿ ‘ಕೈ’ ಹಿಡಿದ ಚಿತ್ರ ನಿರ್ದೇಶಕ ಎಸ್. ನಾರಾಯಣ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 6:42 IST
Last Updated 16 ಮಾರ್ಚ್ 2022, 6:42 IST
   

ಬೆಂಗಳೂರು: ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಮತ್ತು ರಾಜ್ಯ ಪಿಯು ಉಪನ್ಯಾಸಕರ ಸಂಘದ ನಿಕಟಪೂರ್ವ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಬುಧವಾರ ‘ಕೈ’ ಹಿಡಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಇಬ್ಬರಿಗೂ ಕಾಂಗ್ರೆಸ್‌ ಧ್ವಜ ನೀಡಿ ಶಿವಕುಮಾರ್‌ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಅವರು ಪಕ್ಷ ಸೇರಿದ್ದಾರೆ’ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ ಅವರು ಸಿನಿಮಾ ಕ್ಷೇತ್ರ ಮತ್ತು ತಮ್ಮ ಸಮುದಾಯದ ಸಂಘಟನೆ ಮಾಡಲಿದ್ದಾರೆ. ಕಾಂಗ್ರೆಸ್‌ ಸೇರುವವರ ದೊಡ್ಡ ಪಟ್ಟಿಯೇ ನನ್ನಲ್ಲಿದೆ. ಅವರೆಲ್ಲರ ಸೇರ್ಪಡೆಗೆ ದಿನ ನಿಗದಿಪಡಿಸಬೇಕಿದೆ’ ಎಂದರು.

‘ಕಾಂಗ್ರೆಸ್ಸಿನ ಯಾರ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಉಡುಪಿ ಶಾಸಕರ ಜೊತೆ ಏನು ಮಾತನಾಡಿದ್ದಾರೆ ಎನ್ನುವುದೂ ಗೊತ್ತಿದೆ. ತಮ್ಮ ಜೊತೆ ಯಾವ ಶಾಸಕರು ಸಂಪರ್ಕದಲ್ಲಿದ್ದಾರೊ ಅವರನ್ನು ಬಿಜೆಪಿ ಅಧ್ಯಕ್ಷರು ತಡ ಮಾಡದೆ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲಿ’ ಎಂದರು.

‘ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯಿತು, ದೂಳೀಪಟ ಎಂದೆಲ್ಲ ಸುದ್ದಿಯಾಗಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ 200ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಇದು ಮುಂದಿನ ದಿನ ಹೆಜ್ಜೆಗೆ ನಮಗೆ ಅನುಕೂಲ. ಪಂಜಾಬ್‌ನಲ್ಲಿ ನಮ್ಮ ಆಂತರಿಕ ಕಲಹದಿಂದ ಅಧಿಕಾರ ಕೈ ತಪ್ಪಿದೆ’ ಎಂದರು.

‘ಯಡಿಯೂರಪ್ಪ, ಮುಖ್ಯಮಂತ್ರಿ ಏನೇ ಮಾತಾಡಲಿ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ’ ಎಂದೂ ಶಿವಕುಮಾರ್‌ ಹೇಳಿದರು.

ಎಸ್‌. ನಾರಾಯಣ್ ಮಾತನಾಡಿ, ‘ಮೂರು ದಶಕಗಳಿಂದ ನಟ, ನಿರ್ಮಾಪಕ, ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದ ನನಗೆ ನಿರೀಕ್ಷೆ ಮೀರಿದ ಅವಕಾಶ ಕೊಟ್ಟಿದೆ. ನಾನು ರಾಜಕೀಯ ರಂಗಕ್ಕೆ ಏಕೆ ಬಂದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಭಾರತ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಋಣಿ ಆಗಿರಬೇಕು’ ಎಂದರು.

‘ಬ್ರಿಟಿಷ್‌ನವರು ದೇಶ ದೋಚಿ ಹೋದಾಗ, ಅನ್ನ, ನೀರು ಧೈರ್ಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷ ಹಿಂದುಳಿದ ವರ್ಗಗಳ ಧ್ವನಿಯಾಗಿದೆ. ಪಕ್ಷದ ಜಾತ್ಯಾತೀತ ಸಿದ್ದಾಂತ ನನಗೆ ಇಷ್ಟ. ನಾನು ವಿದ್ಯಾರ್ಥಿಯಾಗಿ ಕಾಂಗ್ರೆಸ್‌ಗೆ ಸೇರಿದ್ದೇನೆ. ಕಾಂಗ್ರೆಸ್ ಸೇರ್ಪಡೆ ನನಗೆ ಹೊಸ ಹುರುಪು ತಂದಿದೆ. ಪಕ್ಷಕ್ಕೆ ಹಗಲು ರಾತ್ರಿ ಕೆಲಸ ಮಾಡಲು ಸಿದ್ಧ. 2023ರ ಸಾರ್ವತ್ರಿಕ ಚುನಾವಣೆಗೆ ಪಕ್ಷ ಅಧಿಕಾರಕ್ಕೆ ಬರಬೇಕು. 2023ರ ಚುನಾವಣೆ- ಕಾಂಗ್ರೆಸ್ ಕರ್ನಾಟಕ ಎಂಬ ಸ್ಲೋಗನ್‌ನಲ್ಲಿ ಕೆಲಸ ಮಾಡೋಣ’ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.