ADVERTISEMENT

ಆರ್‌ಎಸ್‌ಎಸ್‌ನ ನಿಜವಾದ ಸಂಸ್ಕೃತಿ ತೆರೆದಿಟ್ಟ ಸಂಸ್ಕೃತಿ ಹೀನ ಸಚಿವ; ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 14:41 IST
Last Updated 3 ಜನವರಿ 2022, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಪ್ರಸಂಗ ಸೋಮವಾರ ನಡೆದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರತಿಮೆ ನಿರ್ಮಾಣಕ್ಕೆ ಒಂದು ರೂಪಾಯಿ ನೀಡದೆ ಬಿಟ್ಟಿ ಪ್ರಚಾರಕ್ಕೆ ಯತ್ನ. ಸರ್ಕಾರದ ಕಾರ್ಯಕ್ರಮದಲ್ಲಿ ಸ್ವಪಕ್ಷದ ಪ್ರಚಾರ ನಡೆದಿದೆ. ತಮ್ಮದೇ ಮುಖ್ಯಮಂತ್ರಿಗಳ ಎದುರೇ ಅಸಭ್ಯ ಪದ ಪ್ರಯೋಗ ನಡೆಸಲಾಗಿದೆ ಎಂದಿದೆ.

ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೆಸರೇಳದೆಯೇ, ಇಂದು ಇಡೀ ರಾಮನಗರದ ಜನತೆ ಎದುರು RSSನ ನಿಜವಾದ ಸಂಸ್ಕೃತಿಯನ್ನು ತೆರೆದಿಟ್ಟ ಸಂಸ್ಕೃತಿ ಹೀನ ಸಚಿವ! ಎಂದು ದೂರಿದೆ.

ADVERTISEMENT

ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ, ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಚಿವ ಅಶ್ವತ್ಥ ನಾರಾಯಣರ ಮಾತುಗಳಿಂದ ಆಕ್ರೋಶಗೊಂಡ ಸಂಸದ ಸುರೇಶ್, ಸಚಿವರತ್ತ ತೆರಳಿದರು. ಅತ್ತ ಅಶ್ವತ್ಥ ನಾರಾಯಣ ಅವರೂ ಕೆರಳಿದರು. ಈ ವೇಳೆ ಇಬ್ಬರು‌ ಕೈ ಕೈ ಮಿಲಾಯಿಸಲು ಮುಂದಾದರು. ಇದರ ಮಧ್ಯೆ ವಿಧಾನ‌ ಪರಿಷತ್ ಸದಸ್ಯ ಎಸ್. ರವಿ ಮೈಕ್‌ನಲ್ಲಿ‌ ಮಾತನಾಡಲು ಮುಂದಾದರು. ಇದಕ್ಕೆ ಅಶ್ವತ್ಥನಾರಾಯಣ ಅವಕಾಶ ನೀಡದಿದ್ದಾಗ, ರವಿ ಕೋಪದಿಂದ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು.

ಈ ಕುರಿತು ರಾಜ್ಯ ಬಿಜೆಪಿ ಕೂಡ ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ ಪಕ್ಷ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.