ADVERTISEMENT

ವಿದ್ಯುತ್ ದರ ಏರಿಸಿ ಆತ್ಮವಂಚನೆಯ ಮಾತಾಡುತ್ತಿದೆ ಬಿಜೆಪಿ: ಕಾಂಗ್ರೆಸ್‌ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2023, 7:16 IST
Last Updated 13 ಜೂನ್ 2023, 7:16 IST
   

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಸಿ, ಈಗ ಆತ್ಮವಂಚನೆಯ ಮಾತಾಡುತ್ತಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್‌ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಜೂನ್‌ ತಿಂಗಳಿನಿಂದ ಗ್ರಾಹಕರಿಗೆ ಎರಡು ಸ್ತರಗಳಲ್ಲಿ (ಸ್ಲ್ಯಾಬ್‌ಗಳಲ್ಲಿ) ವಿದ್ಯುತ್‌ ಯೂನಿಟ್‌ ದರ ನಿಗದಿಪಡಿಸಿದೆ.

ಕೆಇಆರ್‌ಸಿ ಮೇ 12ರಂದು ಹೊರಡಿಸಿದ ಆದೇಶದ ಪ್ರಕಾರ, ಗ್ರಾಹಕರು ಬಳಸಿದ 100 ಯೂನಿಟ್‌ವರೆಗಿನ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹4.15 ಪೈಸೆ ವಿಧಿಸಲಾಗುತ್ತಿದೆ. 100 ಯೂನಿಟ್‌ ಮೀರಿದರೆ, ಬಳಸಿದ ಅಷ್ಟೂ ಯೂನಿಟ್‌ ವಿದ್ಯುತ್‌ಗೆ ₹7ರಂತೆ ದರ ವಿಧಿಸಲಾಗುತ್ತಿದೆ. ಹೀಗಾಗಿ, ಜುಲೈ ತಿಂಗಳಲ್ಲಿ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ₹7ರಂತೆ ದರ ಲೆಕ್ಕ ಹಾಕಿ ಬಿಲ್‌ ನೀಡಲಾಗಿದೆ.

ADVERTISEMENT

ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಎಸ್ಕಾಂಗಳು ಕೆಇಆರ್‌ಸಿ ಮುಂದೆ ಇಟ್ಟಿದ್ದರೂ ಚುನಾವಣೆ ನಡೆಯುತ್ತಿದ್ದ ಹೊತ್ತಿನಲ್ಲಿ ಅನುಮೋದನೆ ನೀಡಿರಲಿಲ್ಲ. ಫಲಿತಾಂಶದ ಮುನ್ನಾದಿನವಷ್ಟೇ (ಮೇ 12ರಂದು) ದರ ಏರಿಕೆಗೆ ಒಪ್ಪಿಗೆ ನೀಡಲಾಗಿತ್ತು.

ವಿದ್ಯುತ್‌ ದರ ಏರಿಕೆ ಬಗ್ಗೆ ಸದ್ಯ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ವಿದ್ಯುತ್ ದರ ಏರಿಸಿ, ಚುನಾವಣೆಯ ನಂತರ ಜಾರಿಗೆ ಬರುವಂತೆ ತಂತ್ರ ರೂಪಿಸಿದ ಬಿಜೆಪಿ ಸರ್ಕಾರ ಈಗ ವಿದ್ಯುತ್ ದರ ಏರಿಕೆಯ ಬಗ್ಗೆ ಆತ್ಮವಂಚಕತನದ ಮಾತಾಡುತ್ತಿದೆ. ಬಿಜೆಪಿಗೆ ಆತ್ಮ ಇದ್ದರೆ ಆತ್ಮಸಾಕ್ಷಿಯಿಂದ ಬೆಲೆ ಏರಿಸಿದ್ದನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಲಿ’ ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

ಇಂಧನ ಸಚಿವರ ಸ್ಪಷ್ಟನೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದ ಅನ್ವಯ ವಿದ್ಯುತ್‌ ದರ ಏರಿಕೆ ಆಗಿದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಸರ್ಕಾರಕ್ಕೂ ದರ ಇಳಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆದೇಶ ರದ್ದು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.