ADVERTISEMENT

ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಸಿಡಿಯುತ್ತಿರುವುದೇಕೆ?: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2022, 9:33 IST
Last Updated 4 ಜೂನ್ 2022, 9:33 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬೆಂಗಳೂರು: ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿರುವುದು ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ, ಚಡ್ಡಿಗೆ ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡ ಬೇಯಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಸಿಡಿಯುತ್ತಿರುವುದೇಕೆ ಎಂದು ಪ್ರಶ್ನಿಸಿದೆ.

‘ಕೆ.ಎಸ್. ಈಶ್ವರಪ್ಪ ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ. ‘ಚಡ್ಡಿ’ ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ? ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..?’ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

‘ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮನೆ ಎದುರು ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಈಶ್ವರಪ್ಪ, ‘ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ... ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ, ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ ಬಾಕಿ ಇದೆ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.