ADVERTISEMENT

ರಾಜ್ಯದಲ್ಲಿ 5ಕ್ಕೇರಿತು ಮೃತರ ಸಂಖ್ಯೆ, 181 ಮಂದಿಯಲ್ಲಿ ಕೊರೊನಾ ಸೋಂಕು ದೃಢ

ಮತ್ತೊಂದು ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2020, 7:46 IST
Last Updated 8 ಏಪ್ರಿಲ್ 2020, 7:46 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ಮಧ್ಯಾಹ್ನ 12 ಗಂಟೆಯವರೆಗೆ ಒಟ್ಟು 181 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಮೃತರ ಸಂಖ್ಯೆ ಐದಕ್ಕೇರಿದೆ. 28 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಲಬುರ್ಗಿಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ. ಮೃತರ ತಾಯಿಗೂ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ಈವರೆಗೆ ಕಲಬುರ್ಗಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿಗೂ ಕೋವಿಡ್-19 ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ತಬ್ಲಿಗಿಜಮಾತ್‌ ಧರ್ಮಸಭೆಗೆ ತೆರಳಿದ್ದ ಜಿಲ್ಲೆಯ 7 ಮಂದಿಯನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

ADVERTISEMENT

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ವಕ್ಫ್‌ ಮಂಡಳಿಯು ಮಸೀದಿಗಳಲ್ಲಿ ಸಮೂಹ ಪ್ರಾರ್ಥನೆ ಮತ್ತು ಕಬ್ರಸ್ತಾನ್ (ಮುಸ್ಲಿಂ ಸ್ಮಶಾನ) ಭೇಟಿಗೆ ಅವಕಾಶಅವಕಾಶ ನೀಡಬಾರದು ಎಂದು ಸೂಚಿಸಿದೆ. ಗುರುವಾರ ಆಚರಿಸುವ ಶಾಬ್‌-ಎ-ಬರಾತ್‌ ವೇಳೆ ಸಾರ್ವಜನಿಕ ಭೇಟಿ ಸಲ್ಲದು ಎಂದು ಸೂಚಿಸಿದೆ.

ಕೋವಿಡ್-19 ಕುರಿತು ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ 97456 97456 ಸಂಪರ್ಕಿಸಿ.

ಮಂಗಳವಾರ ಸಂಜೆ (ಏ.7) 5ರಿಂದ ಬುಧವಾರ (ಏ.8) ಮಧ್ಯಾಹ್ನ 12ರವರೆಗೆ ವರದಿಯಾಗಿರುವ ಪ್ರಕರಣಗಳ ವಿವರ ಇಂತಿದೆ...

ಪ್ರಕರಣ 176-ಉತ್ತರ ಕನ್ನಡ ಜಿಲ್ಲೆಯ 26 ವರ್ಷದ ಮಹಿಳೆ. ತೀವ್ರತರವಾದ ಉಸಿರಾಟ ತೊಂದರೆ ಅನುಭವಿಸುತ್ತಿದ್ದರು ದುಬೈನಿಂದ ಬಂದವರೊಡನೆ ಒಡನಾಟವಿತ್ತು. ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 177- ಕಲಬುರ್ಗಿಯ 65 ವರ್ಷದ ಪುರುಷ. ತೀವ್ರತರದ ಉಸಿರಾಟ ತೊಂದರೆ ಅನುಭವಿಸುತ್ತಿದ್ದರು. ಕಲಬುರ್ಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಪ್ರಕರಣ 178- ಕಲಬುರ್ಗಿಯ 72 ವರ್ಷದ ಮಹಿಳೆ. ಕಲಬುರ್ಗಿಯಲ್ಲಿ ನಿಧನರಾದ ಪ್ರಕರಣ 177ರ ಪುರುಷನ ತಾಯಿ. ಕಲಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 179- ಮಂಡ್ಯ ಜಿಲ್ಲೆಯ 35 ವರ್ಷದ ಪುರುಷ. ಸೋಂಕಿತರೊಂದಿಗೆ ಸಂಬಂಧವಿತ್ತು.. ಮಂಡ್ಯದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 180- ಚಿಕ್ಕಬಳ್ಳಾಪುರ ಜಿಲ್ಲೆಯ 23 ವರ್ಷದ ಪುರುಷ. ದೆಹಲಿಗೆ ಪ್ರಯಾಣ ಬೆಳೆಸಿದ್ದ ಮಾಹಿತಿಯಿದೆ. ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 181- ಬೆಂಗಳೂರಿನ 27 ವರ್ಷದ ಮಹಿಳೆ. ದೆಹಲಿಗೆ ಪ್ರಯಾಣ ಬೆಳೆಸಿದ್ದ ಮಾಹಿತಿಯಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.