
ನ್ಯಾ. ವೀರಪ್ಪ
ಬೆಂಗಳೂರು: ‘ಇಂದು ಕೇರಳದಲ್ಲಿ ಶೇ 10ರಷ್ಟು ಮಾತ್ರವೇ ಭ್ರಷ್ಟಾಚಾರ ಇದ್ದರೆ ಕರ್ನಾಟಕದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ. ನಾನು ಉಪ ಲೋಕಾಯುಕ್ತ ಆದ ಮೇಲೆ ಇದನ್ನೆಲ್ಲಾ ಕಣ್ಣಾರೆ ನೋಡುವ ಅವಕಾಶ ದಕ್ಕಿದೆ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದರು.
ಹೈಕೋರ್ಟ್ ವಕೀಲ ತುಳವನೂರು ಶಂಕರಪ್ಪ ಅವರು ಬರೆದಿರುವ ‘ಓವರ್‌ಸೀಸ್ ಟ್ರಾವೆಲಾಗ್’ ಪ್ರವಾಸ ಕಥನವನ್ನು ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಬುಧವಾರ ಅವರು ಬಿಡುಗಡೆ ಮಾಡಿದರು.
‘ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಕರ್ನಾಟಕ ಭ್ರಷ್ಟಾಚಾರದ ಅಗ್ರಪಟ್ಟಿಯಲ್ಲಿ ಐದನೆಯ ಸ್ಥಾನ ಪಡೆದಿದೆ. ಈ ಪಿಡುಗನ್ನು ಕೂಡಲೇ ತಡೆಯದೇ ಹೋದರೆ ಭವಿಷ್ಯದಲ್ಲಿ ಭೀಕರ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.
‘ನಾನು ಹೋದ ಕಡೆಯಲ್ಲೆಲ್ಲಾ ಆಸ್ಪತ್ರೆ, ಶಾಲೆ ಹಾಸ್ಟೆಲ್‌ಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಶಪಥ ಕೈಗೊಳ್ಳುವಂತೆ ಅಲ್ಲಿನ ಸಿಬ್ಬಂದಿಗೆ ಪ್ರೇರೇಪಿಸುತ್ತಿದ್ದೇನೆ. ಈ ಯಜ್ಞದಲ್ಲಿ ವಕೀಲರೂ ಪಾಲ್ಗೊಂಡು ಸಮಾಜ ಸುಧಾರಣೆಗೆ ಮತ್ತು ದುಷ್ಟರ ಸಂಹಾರಕ್ಕೆ ಪ್ರಯತ್ನಿಸಬೇಕು’ ಎಂದು ಹೇಳಿದರು.
‘ಇಂದು ಮಹಿಳೆಯರು ಅತ್ಯಂತ ಶಕ್ತಿಶಾಲಿ ಎನ್ನುತ್ತಿದ್ದೇವೆ. ಆದರೆ, ಭ್ರಷ್ಟಾಚಾರದಲ್ಲೂ ಅವರು ಶಕ್ತಿಶಾಲಿ ಆಗಿದ್ದಾರೆ. ಹಾಗಾಗಿ, ಭ್ರಷ್ಟಾಚಾರವನ್ನು ಹೇಗೆ ಮತ್ತು ಎಲ್ಲಿಂದ ತಡೆಯಬಹುದು ಎಂಬುದನ್ನು ವಕೀಲ ಸಮೂಹವೊಂದೇ ಸಮರ್ಥವಾಗಿ ನಿರ್ಧರಿಸಬಲ್ಲದು’ ಎಂದು ಅಭಿಪ್ರಾಯಪಟ್ಟರು.
ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್, ‘ವಕೀಲರು ತಮ್ಮೊಳಗಿನ ಪ್ರತಿಭೆಯನ್ನು ಹೊರಚೆಲ್ಲಲು ಉದ್ಯುಕ್ತರಾಗಬೇಕು’ ಎಂದರು.
ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿ, ‘ಇಂದು ಎಲ್ಲ ಇಲಾಖೆಗಳಲ್ಲೂ ಭ್ರಷ್ರಾಚಾರ ತಾಂಡವಾಡುತ್ತಿದ್ದು ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಲೋಕಾಯುಕ್ತ ಕಚೇರಿ ತೆರೆಯುವಂತಹ ದುಃಸ್ಥಿತಿ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತುಳವನೂರು ಶಂಕರಪ್ಪ, ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.