ADVERTISEMENT

ಎಚ್‌ಡಿಕೆಯಿಂದ ಕರ್ನಾಟಕ –ಗುಜರಾತ್ ಮಧ್ಯೆ ವೈಮನಸ್ಸು ಮೂಡಿಸುವ ಯತ್ನ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2023, 6:15 IST
Last Updated 4 ಜನವರಿ 2023, 6:15 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ನಂದಿನಿ–ಅಮುಲ್‌ ವಿಲೀನ ವಿಚಾರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ನಂದಿನಿ–ಅಮುಲ್‌ ವಿಲೀನ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ ಕುಮಾರಸ್ವಾಮಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್‌ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಸು ಮೂಡಿಸುವ ವಿಫಲ ಯತ್ನ ಮಾಡಿದ್ದಾರೆ. ನಂದಿನಿಯನ್ನು ಅಮುಲ್‌ ಜತೆ ವಿಲೀನ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?’ ಎಂದು ಪ್ರಶ್ನಿಸಿದೆ.

‘ಕುಮಾರಸ್ವಾಮಿಯವರೇ, ಹಳೆ ಮೈಸೂರು ಭಾಗಕ್ಕೆ ನೀವು ಮಾಡಿದ ಅನ್ಯಾಯದ ಬಗ್ಗೆ ಹೇಳಿದ ಕೂಡಲೇ ಇಷ್ಟೊಂದು ಹೆದರಿಬಿಟ್ಟರೆ ಹೇಗೆ? ಆ ಭಾಗದಲ್ಲಿ ಜನ ಏನು ಹೇಳುತ್ತಿದ್ದಾರೋ ಅದನ್ನೇ ನಾವೂ ಹೇಳುತ್ತಿದ್ದೇವಷ್ಟೆ. ಜತೆಗೆ ರಾಜ್ಯದ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಕನ್ನಡಿಗರೇ ಎಂಬುದು ತಮಗೆ ತಿಳಿದಿರಲಿ’ ಎಂದು ಬಿಜೆಪಿ ಟೀಕಿಸಿದೆ.

ADVERTISEMENT

‘ಕರ್ನಾಟಕದ ಮೇಲೆ ಅಸೂಯೆ, ಅಸಹನೆ ನಮಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆತಂಕ ನಮಗೆ ಅರ್ಥವಾಗುತ್ತದೆ. ಜನರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಲು ಸೂತ್ರಗಳನ್ನು ತರಾತುರಿಯಲ್ಲಿ ಹೆಣೆಯುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯವಾಗುವುದೆಂಬ ಭಯವೇ?’ ಎಂದು ಬಿಜೆಪಿ ಗುಡುಗಿದೆ.

‘ಅಪ್ಪಟ ಕನ್ನಡಿಗ, ಮಾಜಿ ಪ್ರಧಾನಿ ದೇವೇಗೌಡರಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಕುಮಾರಸ್ವಾಮಿ ಬಿಜೆಪಿಯನ್ನು ನೋಡಿ ಕಲಿಯಬೇಕು. ನಿಮ್ಮ ರಾಜಕೀಯದ ಆಸೆಗಾಗಿ ಕೆಲ ಕಾಲ ತಂದೆಯನ್ನೇ ದೂರವಿಟ್ಟ ಅವಕಾಶವಾದಿಯಲ್ಲವೇ ನೀವು? ಕನ್ನಡಿಗರನ್ನು ನೀವು ನಡೆಸಿಕೊಂಡಿದ್ದಕ್ಕಿಂತಲೂ ಗೌರವಯುತವಾಗಿ ಬಿಜೆಪಿ ನಡೆಸಿಕೊಳ್ಳುತ್ತಿದೆ ಎಂಬುದು ನೆನಪಿರಲಿ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ (ಮನ್‌ ಮುಲ್‌) ಆವರಣದಲ್ಲಿ ಮೆಗಾ ಡೇರಿ ಉದ್ಘಾಟಿಸಿ ಮಾತನಾಡಿದ್ದ ಶಾ, ‘1975ರಿಂದಲೂ ಕೆಎಂಎಫ್‌ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಗುಜರಾತ್‌ ಸಹಕಾರ ಒಕ್ಕೂಟವೂ ಪ್ರಗತಿಯ ಹಾದಿಯಲ್ಲಿದೆ. ‘ಅಮುಲ್’ ಹಾಗೂ ‘ನಂದಿನಿ’ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದಿದ್ದರು.

ಅಮಿತ್ ಶಾ ಅವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.