ADVERTISEMENT

ಕೋವಿಡ್-19 ನಿಯಂತ್ರಣ: ಡಿಸಿಎಂ ಅಶ್ವತ್ಥನಾರಾಯಣ ಪಂಚಸೂತ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:45 IST
Last Updated 7 ಜುಲೈ 2020, 15:45 IST
 ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸರ್ವಸಜ್ಜಾಗಿದೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಾರ್ವಜನಿಕರು ಕೂಡ ಸ್ವಯಂ ನಿಯಂತ್ರಣ ಹೇರಿಕೊಂಡು ಸಹಕರಿಸಿದರೆ ಈ ಸೋಂಕನ್ನು ತಡೆಗಟ್ಟುವುದು ಕಷ್ಟವೇನಲ್ಲ. ಅದಕ್ಕಾಗಿ ನಾವು ಪಂಚಸೂತ್ರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮಂಗಳವಾರ ಸಂಜೆ ’ಸಮರ್ಥ ಭಾರತ’ ಸ್ವಯಂ ಸೇವಾ ಸಂಸ್ಥೆಯ ಫೇಸ್ ಬುಕ್ ಲೈವ್ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸೋಂಕಿನ ಬಗ್ಗೆ ಆತಂಕ ಮತ್ತು ಭಯ ಬೇಡ. ಆದರೆ ನಾವು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉಳಿದವರ ಆರೋಗ್ಯವನ್ನು ರಕ್ಷಿಸಬೇಕು. ಇದೇ ಸಮರ್ಥ ಭಾರತದ ಧ್ಯೇಯವಾಗಿದೆ ಎಂದು ನುಡಿದರು.

ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ಯಾನಿಟೈಜರ್‌ನಿಂದ ಸ್ವಚ್ಛತೆ, ಸೋಂಕಿತರಿಂದ ಅಥವಾ ಜನರಿಂದ ದೂರವಿರುವುದು ಹಾಗೂ ಆದಷ್ಟು ಉತ್ತಮ ಆಹಾರವನ್ನು ಸೇವಿಸುತ್ತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಈ ಸೂತ್ರಗಳನ್ನು ಪಾಲಿಸಿದರೆ, ನಾವೂ ಚೆನ್ನಾಗಿರುತ್ತೇವೆ, ಇತರರು ಚೆನ್ನಾಗಿರುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.

ADVERTISEMENT

ಮುನ್ನೆಚ್ಚರಿಕೆ ಎಂಬುದು ಸದಾ ನಮ್ಮನ್ನು ಕಾಪಾಡುತ್ತದೆ. ಜನರ ರಕ್ಷಣೆಗೆ ಸರಕಾರ, ಆಸ್ಪತ್ರೆಗಳಿವೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ಕಾಯಿಲೆ ತಂದುಕೊಳ್ಳುವುದು ಖಂಡಿತಾ ಬೇಡ. ಆದಷ್ಟು ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರ ಜತೆಗೆ, ಶ್ವಾಸಕೋಶಕ್ಕೆ ಶಕ್ತಿ ತುಂಬಲು ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು. ಯಾವುದೇ ಕಾರಣಕ್ಕೂ ದೇಹದಲ್ಲಿ ಆಮ್ಲಜನಕದ ಕೊರತೆಯಾಗಬಾರದು. ಒಂದು ವೇಳೆ ಅದರ ಕೊರತೆ ಉಂಟಾದರೆ ಎಲ್ಲ ಸಮಸ್ಯೆಗಳಿಗೆ ಅದೇ ಮೂಲವಾಗುತ್ತದೆ. ಇದರ ಜತೆಗೆ ಒಳ್ಳೆಯ ನಿದ್ದೆಯನ್ನೂ ಮಾಡಬೇಕು. ಅದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಉಪ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಹೊರಗೆ ಬಂದಾಗಲೂ ಸ್ವಚ್ಛತೆ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಬಟ್ಟೆ ಅಥವಾ ಮಾಸ್ಕ್ ಇಲ್ಲದೆ ಸೀನುವುದು, ಕೆಮ್ಮುವುದು ಮಾಡಬಾರದು. ಉಗುಳಬಾರದು. ಇದರ ಜತೆಗೆ, ಉತ್ತಮ ಆಹಾರ ಸೇವನೆ ಮುಖ್ಯ. ತರಕಾರಿ, ಹಣ್ಣುಗಳ ಜತೆಗೆ ನಮ್ಮ ಸಾಂಪ್ರದಾಯಿಕ ಪದಾರ್ಥಗಳನ್ನು ಬಳಸಿ ಕಷಾಯ ಮಾಡಿಕೊಂಡು ಕುಡಿದರೆ ಆರೋಗ್ಯಕ್ಕೆ ಉತ್ತಮ. ಇದಕ್ಕೆ ಪೂರಕವಾದ ಮಾಹಿತಿ ಸಮರ್ಥ ಭಾರತ ವೆಬ್ ನಲ್ಲಿ ಸಿಗುತ್ತದೆ. ಪ್ರಯತ್ನ ಮಾಡಿ ಎಂದು ಡಿಸಿಎಂ ಸಲಹೆ ನೀಡಿದರು.

ಆತಂಕ ಬೇಡ: ಬಹಳಷ್ಟು ಜನ ಈ ಸೋಂಕಿಗೆ ಭಯಪಡುತ್ತಿದ್ದಾರೆ. ಹಾಗೆ ನೋಡಿದರೆ ಶೇ 80ರಷ್ಟು ಜನರು ’ಎ’ ಸಿಂಪ್ಟೇಮಿಕ್ ಆಗಿರುತ್ತಾರೆ. ಇವರಿಗೆ ಸೋಂಕು ಬರುವುದು ಹೋಗುವುದು ಗೊತ್ತಾಗುವುದೇ ಇಲ್ಲ. ಇವರಿಗೆ ಕೆಮ್ಮು, ನೆಗಡಿ, ತಲೆನೋವು ಇರೋದಿಲ್ಲ. ಹೊಸ ವೈರಸ್ ಆದ ಕಾರಣ ನಮಗೆ ಅದರ ಸ್ವಭಾವ ಅರ್ಥವಾಗಿದ್ದು ತಡವಾಯಿತು. ಈಗ ನಮ್ಮಲ್ಲಿ ಉತ್ತಮ ಚಿಕಿತ್ಸೆಯೂ ಲಭ್ಯವಿದೆ, ಹಾಗೂ ಉತ್ತಮ ವ್ಯವಸ್ಥೆಯೂ ಇದೆ. ಅದರಲ್ಲೂ ರಕ್ತದೊತ್ತಡ, ಮಧುಮೇಹದಂಥ ಕಾಯಿಲೆಗಳಿರುವವರು ಕೊಂಚ ಎಚ್ಚರ ವಹಿಸಬೇಕು ಎಂದು ಅವರು ನುಡಿದರು.

ಹಾಸಿಗೆಗಳ ಕೊರತೆ ಇಲ್ಲ: ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆ ಉತ್ತಮವಾಗಿರುವುದರ ಜತೆಗೆ, ಹಾಸಿಗೆಗಳ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆ ಸೇರಿ ಎಲ್ಲೆಡೆಯಿಂದ 20 ಸಾವಿರ ಹಾಸಿಗೆಗಳು ನಮ್ಮಲ್ಲಿವೆ. ಈಗಾಗಲೇ 2,500 ಹಾಸಿಗೆಗಳು ಬಳಕೆಯಾಗುತ್ತಿವೆ. ಜಿಕೆವಿಕೆ, ರವಿಶಂಕರ ಗುರೂಜಿ ಆಶ್ರಮ, ಹಜ್ ಭವನ, ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳು ಕೆಲಸ ಮಾಡುತ್ತಿವೆ. ಇದರ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಎಸ್) ದಲ್ಲಿ 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಸಿದ್ಧವಾಗುತ್ತಿವೆ. ಆದಷ್ಟು ಬೇಗ 30 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

ಬೆಂಗಳೂರು ನಗರದಲ್ಲಿ 31 ಫೀವರ್ ಕ್ಲೀನಿಕ್ ಗಳಿವೆ. ಯಾರಿಗಾದರೂ ಸೋಂಕಿನ ಭಯವಿದ್ದರೆ ಅಲ್ಲಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬಹುದು. ಒಂದು ವೇಳೆ ವರದಿ ಬಂದ ಮೇಲೆ ಪಾಸಿಟೀವ್ ಬಂದರೆ ಅಂತಹ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಪಾಲಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸದಾ ಸಜ್ಜಾಗಿರುತ್ತಾರೆಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.