ADVERTISEMENT

ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ ಕುಣಿಗಲ್ ಶಾಸಕ ರಂಗನಾಥ್‌ಗೆ ಡಿಸಿಎಂ ಡಿಕೆಶಿ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2023, 9:22 IST
Last Updated 28 ಜೂನ್ 2023, 9:22 IST
ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಆಶಾ ಎಂಬುವರ ಕೀಲು ಶಸ್ತ್ರಚಿಕಿತ್ಸೆ ಮಾಡಿದರು.  
ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಆಶಾ ಎಂಬುವರ ಕೀಲು ಶಸ್ತ್ರಚಿಕಿತ್ಸೆ ಮಾಡಿದರು.     

ಬೆಂಗಳೂರು: ಕೀಲು ನೋವಿನಿಂದ ಬಳಲುತ್ತಿದ್ದ ಕುಣಿಗಲ್‌ ತಾಲ್ಲೂಕಿನ ಕುಂದೂರು ಗ್ರಾಮದ ಮಹಿಳೆಯೊಬ್ಬರಿಗೆ ಕೀಲು ಮತ್ತು ಮೂಳೆ ರೋಗ ತಜ್ಞರೂ ಆಗಿರುವ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಶಾಸಕರಾದವರು ಜನರ ಕಷ್ಟಕ್ಕೆ ನೆರವಾಗಬೇಕು. ಸೇವೆ, ಅಭಿವೃದ್ಧಿ ಕಾರ್ಯಗಳ‌ ಮೂಲಕವೇ ನಾಯಕರನ್ನು ಜನ ಗುರುತಿಸಬೇಕು. ಕುಣಿಗಲ್ ಶಾಸಕರಾದ ಡಾ. ಎಚ್.ಡಿ. ರಂಗನಾಥ್ ಅವರು ಆರ್ಥಿಕ ತೊಂದರೆಯಲ್ಲಿದ್ದ ಬಡ ಮಹಿಳೆಗೆ ತಾವೇ ಖುದ್ದಾಗಿ ಶಸ್ತ್ರಚಿಕಿತ್ಸೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಂಥ ಸೇವೆಗಳೇ ಒಬ್ಬ ರಾಜಕಾರಣಿಗೆ ಆತ್ಮ ಸಂತೃಪ್ತಿ ತಂದುಕೊಡುವ ಸಂಗತಿಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೀಲು ನೋವಿನಿಂದ ಬಳಲುತ್ತಿದ್ದ ಕುಣಿಗಲ್‌ ತಾಲ್ಲೂಕಿನ ಕುಂದೂರು ಗ್ರಾಮದ ಆಶಾ (42) ಎಂಬುವರಿಗೆ ಶಾಸಕ ಡಾ. ರಂಗನಾಥ್ ತಮ್ಮ ವೈದ್ಯ ಮಿತ್ರರೊಂದಿಗೆ ಸೇರಿ ಸೋಮವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದರು.

ADVERTISEMENT

ಪತಿ ಅನಾರೋಗ್ಯ ಪೀಡಿತರಾದ ಕಾರಣ ಇಬ್ಬರು ಮಕ್ಕಳ ಪೋಷಣೆಯ ಹೊಣೆ ಆಶಾ ಅವರ ಮೇಲಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅವರು, ಹತ್ತು ವರ್ಷದ ಹಿಂದೆ ಮಂಡಿ ಕೀಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಗ ಮತ್ತೆ ತೀವ್ರ ನೋವು ಕಾಣಿಸಿಕೊಂಡಿತ್ತು.

ಕೀಲು ತಪ್ಪಿದ (ಡಿಸ್‌ಲೊಕೇಟ್‌) ಕಾರಣ ಮತ್ತೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಅದಕ್ಕೆ ₹3 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹಣ ಹೊಂದಿಸಲಾಗದ ಕಾರಣ ಆಶಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ. ಈ ವಿಷಯವನ್ನು ಕುಂದೂರು ಗ್ರಾಮದ ಮುಖಂಡ ವಸಂತ್ ಕುಮಾರ್ ಎಂಬುವರು ರಂಗನಾಥ್ ಅವರ ಗಮನಕ್ಕೆ ತಂದಿದ್ದರು.

ಇದನ್ನೂ ಓದಿ... ಕುಣಿಗಲ್: ಮಂಡಿಕೀಲು ಶಸ್ತ್ರಚಿಕಿತ್ಸೆ ಮಾಡಿದ ಶಾಸಕ ಡಾ.ರಂಗನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.