ADVERTISEMENT

ಡಬ್ಲ್ಯುಇಎಫ್‌ ಸಮಾವೇಶ: ದಾವೋಸ್‌ಗೆ ರಾಜ್ಯದ ನಿಯೋಗ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 16:01 IST
Last Updated 18 ಜನವರಿ 2026, 16:01 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ದಾವೋಸ್‌–ಕ್ಸೋಸ್ಟರ್ಸ್‌ನಲ್ಲಿ ಇದೇ 19ರಿಂದ 23ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಮಾವೇಶದಲ್ಲಿ ಭಾಗಿಯಾಗಲು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ನೇತೃತ್ವದ ನಿಯೋಗವು ಸ್ವಿಟ್ಜರ್‌ಲೆಂಡ್‌ಗೆ ಹೊರಟಿದೆ.

ಸಮಾವೇಶದ ಭಾಗವಾಗಿ ರಾಜ್ಯದ ನಿಯೋಗವು 45ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆ, ದುಂಡುಮೇಜಿನ ಸಭೆಗಳಲ್ಲಿ ಭಾಗಿಯಾಗಲಿದೆ. ಅಮೆಜಾನ್ ವೆಬ್ ಸರ್ವೀಸಸ್, ಲೆನೊವೊ, ವಾಸ್ಟ್ ಸ್ಪೇಸ್, ಕೋಕಾ-ಕೋಲಾ, ಫಿಲಿಪ್ ಮಾರಿಸ್, ಇಂಪೀರಿಯಲ್ ಕಾಲೇಜ್ ಲಂಡನ್, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ ಜತೆಗೆ ರಾಜ್ಯದ ನಿಯೋಗದ ಸಭೆ ನಿಗದಿಯಾಗಿದೆ.

‘ಹೂಡಿಕೆ ಸಂಬಂಧ ಹೂಡಿಕೆದಾರರು ತ್ವರಿತವಾಗಿ ನಿರ್ಧಾರಕ್ಕೆ ಬರುವುದಕ್ಕೆ ನೆರವಾಗಲು, ಯೋಜನೆಗಳನ್ನು ಶೀಘ್ರವಾಗಿ ಕಾರ್ಯಾರಂಭ ಮಾಡಲು ಉತ್ತೇಜನ ನೀಡುವ ಗುರಿಯನ್ನು ಹೊಂದಲಾಗಿದೆ. ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಎಲೆಕ್ಟ್ರಾನಿಕ್ಸ್‌, ದತ್ತಾಂಶ ಕೇಂದ್ರ, ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪನೆ ಸಂಬಂಧ ಜಾಗತಿಕ ಮಟ್ಟದ ಹೂಡಿಕೆದಾರರ ಜತೆ ಮಾತುಕತೆ ನಡೆಸಲಾಗುವುದು’ ಎಂದು ಎಂ.ಬಿ.ಪಾಟೀಲರು ಹೇಳಿದ್ದಾರೆ.

ADVERTISEMENT

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಡಿಎ ಆಯುಕ್ತ ಮಣಿವಣ್ಣನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ನಿಯೋಗದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.