
ಬೆಂಗಳೂರು: ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ.
ಬೇಸಿಗೆ ಬಿರುಸುಗೊಳ್ಳುತ್ತಿರುವ ಹೊತ್ತಿನಲ್ಲಿ ಕುಡಿಯುವ ನೀರಿನ ಬೇಡಿಕೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ನೀರು ಪೂರೈಕೆಯ ಘಟಕಗಳಿಗೂ ಗ್ರಹಣ ಬಡಿದಿದೆ.
‘31 ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಅಳವಡಿಸಿರುವ ಒಟ್ಟು 19,407 ಶುದ್ಧ ನೀರಿನ ಘಟಕಗಳ ಪೈಕಿ, 2,911 ಘಟಕಗಳು ಸ್ಥಗಿತಗೊಂಡಿವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಶುದ್ಧ ನೀರಿನ ಪೂರೈಕೆಯಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ, ಕಲುಷಿತ ನೀರು ಕುಡಿದು ಸಂಭವಿಸಿದ ಸಾವು ನೋವುಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು
ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಮತ್ತು ಲೋಕಾಯುಕ್ತವು ಸರ್ಕಾರಕ್ಕೆ ಈಗಾಗಲೇ ಚಾಟಿ ಬೀಸಿದೆ. ವಿಧಾನ ಮಂಡಲ ಅಧಿವೇಶನದಲ್ಲಿಯೂ
ಈ ವಿಷಯ ಪ್ರಸ್ತಾಪಗೊಂಡಿದೆ. ಈ ಕಾರಣಕ್ಕೆ, ದುಃಸ್ಥಿತಿಯಲ್ಲಿರುವ ಘಟಕಗಳ ದುರಸ್ತಿಗೆ ಇಲಾಖೆ ಮುಂದಾಗಿದೆ.
ಸ್ಥಗಿತಗೊಂಡಿರುವ ಘಟಕಗಳನ್ನು ಪುನಶ್ಚೇತನಗೊಳಿಸಲು 2025–26ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯಲ್ಲಿ, ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ) ಮತ್ತು ವಿಶೇಷ ಅಭಿವೃದ್ಧಿ ಯೋಜನೇತರ (ನಾನ್ ಎಸ್‌ಡಿಪಿ) ಅನುದಾನದಲ್ಲಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಪ್ರತಿ ಘಟಕಕ್ಕೆ ತಲಾ ₹50 ಸಾವಿರದಂತೆ ಇಲಾಖೆಯು ಅನುದಾನ ಹಂಚಿಕೆ ಮಾಡಿದೆ. 2,446 ಘಟಕಗಳ ದುರಸ್ತಿಗೆ ಎಸ್‌ಡಿಪಿ ಅಡಿ ₹12.23 ಕೋಟಿ, 454 ಘಟಕಗಳ ದುರಸ್ತಿಗೆ ಎಸ್‌ಡಿಪಿ ಹೊರತಾದ ಮೂಲದಿಂದ ₹2.27 ಕೋಟಿ ಸೇರಿ ಒಟ್ಟು 2,900 ಘಟಕಗಳನ್ನು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡಲು ₹15.50 ಕೋಟಿ ಒದಗಿಸಿದೆ.
‘ಶುದ್ಧ ನೀರು ಪೂರೈಕೆ ವಿಚಾರದಲ್ಲಿ ವೈಯಕ್ತಿಕವಾಗಿ ಗಮನಹರಿಸಬೇಕು. ದುಃಸ್ಥಿತಿಯಲ್ಲಿರುವ ಘಟಕಗಳನ್ನು ತುರ್ತಾಗಿ ದುರಸ್ತಿಗೊಳಿಸಿ ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಬೇಕು. ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣ ಆಗಿರುವುದರಿಂದ ಗಂಭೀರ ವಾಗಿ ಪರಿಗಣಿಸಬೇಕು’ ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳು ಮತ್ತು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಇಲಾಖೆಯ ಆಯುಕ್ತ
ಡಿ. ರಂದೀಪ್ ಸೂಚನೆ ನೀಡಿದ್ದಾರೆ.
‘ಶುದ್ಧ ನೀರಿನ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಟೆಂಡರ್ ಮೂಲಕ ಏಜೆನ್ಸಿಗಳಿಗೆ ವಹಿಸಲಾಗುತ್ತದೆ. ನಿರ್ವಹಣೆಯ ಅವಧಿ ಮುಗಿದ ಬಳಿಕ ಏಜೆನ್ಸಿಗಳು ಗ್ರಾಮ ಪಂಚಾಯಿತಿಗಳಿಗೆ ಘಟಕವನ್ನುಹಸ್ತಾಂತರಿಸಬೇಕು. ಎಲ್ಲ ಘಟಕಗಳ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿ ವಾರ್ಷಿಕ ₹36 ಸಾವಿರ ವೆಚ್ಚ →ಮಾಡಲು ಅವಕಾಶವಿದೆ.
ಆದರೆ, ಕೆಲವು ಜಿಲ್ಲೆಗಳಲ್ಲಿ ಖಾಸಗಿ ಏಜೆನ್ಸಿಗಳು ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿರುವ ಕಾರಣ ಈ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ’ ಎಂದು ಇಲಾಖೆಯ ಕಾರ್ಯಪಾಲಕ ಎಂಜಿನಿಯರೊಬ್ಬರು ತಿಳಿಸಿದರು.
‘ವಿವಿಧ ಕಡೆ ಅಂದಾಜು ತಲಾ ₹12 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಈ ಘಟಕಗಳು ತಾಂತ್ರಿಕ ಸಮಸ್ಯೆ, ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿವೆ. ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿದ ದಿನದಿಂದ ತೆರೆದೇ ಇಲ್ಲ. ಇನ್ನೂ ಕೆಲವೆಡೆ ವಿದ್ಯುತ್ ಬಾಕಿ ಉಳಿಸಿಕೊಂಡ ಕಾರಣ ವಿದ್ಯುತ್ ಸಂಪರ್ಕವನ್ನು ಎಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ’ ಎಂದು ಅವರು ತಿಳಿಸಿದರು.
‘ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರಗಳಲ್ಲಿ ಮೆಂಬರೇನ್ ಅತಿ ಮುಖ್ಯ ಭಾಗ. ನೀರನ್ನು ಭೌತಿಕವಾಗಿ ಸೋಸುವ ಮೆಂಬರೇನ್‌ಗೆ ಕನಿಷ್ಠ ₹23 ಸಾವಿರದಿಂದ ಗರಿಷ್ಠ ₹30 ಸಾವಿರ ಬೆಲೆಯಿದೆ. ಒಂದೂವರೆ ವರ್ಷದವರೆಗೂ ಇದು ಕಾರ್ಯನಿರ್ವಹಿಸುತ್ತದೆ. ಒಂದು ಘಟಕಕ್ಕೆ ಎರಡು ಮೆಂಬರೇನ್ ಅವಶ್ಯ. ಇಲಾಖೆ ನೀಡಿರುವ ₹50 ಸಾವಿರ ಅನುದಾನದಲ್ಲಿ ಈಮೆಂಬರೇನ್‌ಗಳನ್ನು ಬದಲಾಯಿಸಲಷ್ಟೆ ಸಾಧ್ಯ. ಸರ್ಕಾರ ಹಂಚಿಕೆ ಮಾಡಿರುವ ಈ ಹಣದಲ್ಲಿ ಪೂರ್ಣ ಪ್ರಮಾಣದ ದುರಸ್ತಿ ಅಸಾಧ್ಯ’ ಎಂದೂ ಅವರು ತಿಳಿಸಿದರು.
19,407
ಶುದ್ಧ ನೀರಿನ ಒಟ್ಟು ಘಟಕಗಳು
2,911
ಸ್ಥಗಿತಗೊಂಡ ಘಟಕಗಳು
16,496
ಕಾರ್ಯನಿರ್ವಹಿಸುತ್ತಿರುವ ಘಟಕಗಳು
₹50 ಸಾವಿರ
ಪ್ರತಿ ಘಟಕದ ದುರಸ್ತಿಗೆ ಒದಗಿಸಿದ ಹಣ
ಕಲಬುರಗಿಯಲ್ಲಿ ಅತೀ ಹೆಚ್ಚು ಘಟಕ ಸ್ಥಗಿತ
ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಣೆಹೊತ್ತ ಪ್ರಿಯಾಂಕ್ ಖರ್ಗೆ ಉಸ್ತುವಾರಿ ಸಚಿವರಾಗಿರುವ ಕಲಬುರಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರು ನೈಸರ್ಗಿಕವಾಗಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಅಂಶ ಹೊಂದಿರುವುದರಿಂದ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ಭಾಗದಲ್ಲಿ ಅಳವಡಿಸಿದ ಘಟಕಗಳಲ್ಲಿ ಹೆಚ್ಚಿನವು ಜಲಮೂಲಗಳ ಕೊರತೆ, ಅಸಮರ್ಪಕ ಅನುಷ್ಠಾನ, ಅವೈಜ್ಞಾನಿಕ ಕಾಮಗಾರಿ, ಅನುದಾನ ಕೊರತೆ ಮತ್ತಿತರ ಕಾರಣಗಳಿಗೆ ಸ್ಥಗಿತಗೊಂಡಿವೆ. ಕೆಲವು ಘಟಕಗಳ ಬಾಗಿಲು ಮುಚ್ಚಿದ್ದು, ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು 358 ಘಟಕಗಳು ಕೆಲಸ ಮಾಡುತ್ತಿಲ್ಲ. ಕೊಪ್ಪಳದಲ್ಲಿ 280, ಯಾದಗಿರಿಯಲ್ಲಿ 247, ವಿಜಯಪುರ ಜಿಲ್ಲೆಯಲ್ಲಿ 243 ಘಟಕಗಳು ನಿಷ್ಕ್ರಿಯವಾಗಿವೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.
‘ನಿರ್ವಹಣೆಗೆ ಹೆಚ್ಚು ಅನುದಾನ ಬೇಕು’
‘ನಿರ್ವಹಣೆಗೆ ಅಗತ್ಯವಾದಷ್ಟು ಅನುದಾನವನ್ನು ಇಲಾಖೆ ಒದಗಿಸದೇ ಇರುವುದರಿಂದ ಘಟಕಗಳಿದ್ದರೂ ಜನರಿಗೆ ಉಪಯೋಗ ಇಲ್ಲದಂತಾಗಿದೆ. ಇಲಾಖೆ ಅನುದಾನ ನೀಡದಿದ್ದರೆ ಕರ ವಸೂಲಿ ಹಣದಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಒಂದು ಘಟಕದ ಸಂಪೂರ್ಣ ದುರಸ್ತಿಗೆ ಕನಿಷ್ಠ ₹3.50 ಲಕ್ಷ ವೆಚ್ಚ ತಗುಲಲಿದೆ. ರಾಜ್ಯದಲ್ಲಿರುವ ಬಹುತೇಕ ಘಟಕಗಳು ಸಂಪೂರ್ಣ ದುರಸ್ತಿಯಲ್ಲಿವೆ. ಇಲಾಖೆ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಘಟಕಗಳು ನಿರ್ವಹಿಸುವಂತೆ ಮಾಡಲು ಸಾಧ್ಯ’ ಎಂದು ಇಲಾಖೆಯ ಎಂಜಿನಿಯರ್ ಮಾಹಿತಿ ನೀಡಿದರು.
ಶುದ್ಧ ನೀರು ಪೂರೈಕೆಗೆ ಕ್ರಮ: ಏಜೆನ್ಸಿಗಳು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ತೋರಿಸಿದ ಆಸಕ್ತಿಯನ್ನು ನಿರ್ವಹಣೆಗೆ ತೋರಿಸುವುದಿಲ್ಲ. ಏಜೆನ್ಸಿಗಳಿಂದ ಹಸ್ತಾಂತರವಾಗಿರುವ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ಸರಿಯಾಗಿ ನಿರ್ವಹಿಸದಿರುವುದೂ ಸಮಸ್ಯೆಯಾಗಿದೆ. ಘಟಕಗಳ ಕಾರ್ಯನಿರ್ವಹಣೆಯ ಜೊತೆಗೆ, ಕುಡಿಯುವ ನೀರಿನ ಕೊರತೆ ಕಾಣಿಸಿಕೊಳ್ಳಬಹುದಾದ ಹಳ್ಳಿಗಳನ್ನು 15 ದಿನಗಳ ಮೊದಲೇ ಗುರುತಿಸಿ ಶುದ್ಧ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದುಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.