ADVERTISEMENT

ಮೀಸಲಾತಿ ಘೋಷಣೆಯಿಂದ ನಿದ್ದೆಗೆಟ್ಟ ಕಾಂಗ್ರೆಸ್‌: ಶ್ರೀರಾಮುಲು

140 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು: ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:24 IST
Last Updated 1 ಏಪ್ರಿಲ್ 2023, 5:24 IST
ಬಿ.ಶ್ರೀರಾಮುಲು, ಸಾರಿಗೆ ಸಚಿವ 
ಬಿ.ಶ್ರೀರಾಮುಲು, ಸಾರಿಗೆ ಸಚಿವ    

ಹಾವೇರಿ: ‘ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹರಾಜಿಗೆ ಬರಲಿದೆ. ನಾವು ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ, 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಜನರಿಗೆ ಟೋಪಿ ಹಾಕೋದು, ಕಿವಿಯಲ್ಲಿ ಹೂ ಇಡೋದು, ಡೋಂಗಿ ಮಾತನಾಡೋದು ಮಾಡುತ್ತಾ ಇದೆ. ಮೀಸಲಾತಿ ಘೋಷಣೆ ಬಳಿಕ ಕಾಂಗ್ರೆಸ್ ನಿದ್ದೆಗೆಟ್ಟಿದೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಬಿಜೆಪಿ ಶಾಸಕರಿಗೆ ಡಿಕೆಶಿ ಗಾಳ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರಾಗಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯುತ್ತಾರೆ ಅಂದರೆ, ಕಾಂಗ್ರೆಸ್‌ನವರಿಗೆ ಸೋಲಿನ ಭಯ ಕಾಡುತ್ತಿದೆ ಎಂದರ್ಥ. ಡಿಕೆಶಿ ಮಾತಿಗೆ ನಮ್ಮ ಪಕ್ಷದ ಶಾಸಕರು ಮರುಳಾಗಿ ಕಾಂಗ್ರೆಸ್ಸಿಗೆ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ವರುಣಾದಲ್ಲಿ ನನ್ನನ್ನು ಸೋಲಿಸೋ ಪ್ರಯತ್ನ ಮಾಡ್ತಾ ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ನಿಜವಾಗಿದ್ದರೆ ಸಿದ್ದರಾಮಯ್ಯ ಬಾದಾಮಿಯಲ್ಲಿ ಕೂಡಾ ಗೆಲ್ಲುತ್ತಾ ಇರಲಿಲ್ಲ. ಬಾದಾಮಿಯಲ್ಲಿ ಜೆಡಿಎಸ್‌ನಿಂದ ಬೇವಿನಮರದ ನಿಂತಿದ್ರು. ಅವರು 20 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಅವೆಲ್ಲವೂ ಬಿಜೆಪಿ ಮತಗಳೇ. ಆ ಮತಗಳು ನನಗೆ ಬಿದ್ದಿದ್ದರೆ ನಾನು ಗೆಲ್ಲುತ್ತಿದ್ದೆ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ರೆ, ಸಿದ್ದರಾಮಯ್ಯನವರ ಕತೆ ಅಂದೇ ಮುಗಿದು ಹೋಗುತ್ತಿತ್ತು ಎಂದು ತಿರುಗೇಟು ನೀಡಿದರು.

ಶಿಗ್ಗಾವಿಯಲ್ಲಿ ಸಿಎಂ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಸಿಎಂ ಎರಡು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಬಗ್ಗೆ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತಾರೆ. ಬೊಮ್ಮಾಯಿಯವರದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಎಲ್ಲ ಸಮುದಾಯಗಳಿಗೆ ಮೀಸಲಾತಿ ನ್ಯಾಯ ಒದಗಿಸಿ ಸೈ ಎನಿಸಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗೋಪಾಲಕೃಷ್ಣರ ರಾಜೀನಾಮೆ ನೋವು ತಂದಿದೆ’

ಹಾವೇರಿ: ‘ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಿರುವುದು ನನಗೆ ಮತ್ತು ಕಾರ್ಯಕರ್ತರಿಗೆ ನೋವು ತಂದಿದೆ. ಅವರ ರಾಜೀನಾಮೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಅವರ ಆತುರದ ನಿರ್ಧಾರ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಗೋಪಾಲಕೃಷ್ಣ ಅವರು ಬಿಜೆಪಿಯಲ್ಲಿ ಇದ್ದಿದ್ರೆ ಮತ್ತೆ ಗೆಲುವು ಸಾಧಿಸುತ್ತಿದ್ದರು. ರಾಜೀನಾಮೆ ಕೊಡುವ ಮೊದಲು ನನ್ನ ಜೊತೆ ಮಾತನಾಡಿಲ್ಲ. ನಮ್ಮ ಪಕ್ಷ ಕೂಡ್ಲಗಿ ಕ್ಷೇತ್ರದಲ್ಲಿ ಬಲಿಷ್ಟವಾಗಿದೆ. ಮತ್ತೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆಎಂದರು.

ಆರು ಶಾಸಕರು ಗೋಪಾಲಕೃಷ್ಣ ಜೊತೆ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರಂತೆ ಎಂಬ ಪ್ರಶ್ನೆಗೆ, ಗಾಳಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ. ಯಾರೂ ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.